ಬಿಷ್ಣುಪುರ (ಪಶ್ಚಿಮ ಬಂಗಾಳ): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಮೃತದೇಹವನ್ನು ಮೂರು ಭಾಗಗಳಾಗಿ ಬೇರ್ಪಡಿಸಿ ಹೂತು ಹಾಕಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಮುಮ್ತಾಜ್ ಶೇಖ್ (35) ಎಂಬುವವರೇ ಗಂಡನಿಂದ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಅಲೀಂ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಬರ್ಬರ ಕೊಲೆ: ಖಾರದ ಪುಡಿ ಎರಚಿ ಯುವಕನ ಹತ್ಯೆ
ಆರೋಪಿ ಅಲೀಂ ಶೇಖ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ ಕೆಲಸಕ್ಕೆಂದು ಮುಮ್ತಾಜ್ ಪತಿಯೊಂದಿಗೆ ಹೊರಗೆ ಹೋಗಿದ್ದಳು. ಆದರೆ, ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇತ್ತ, ಅಲೀಂ ಮಾತ್ರ ಎಂದಿನಂತೆ ರಾತ್ರಿ ಮರಳಿ ತನ್ನ ಮನೆಗೆ ಬಂದಿದ್ದ. ಹೀಗಾಗಿಯೇ ಸ್ಥಳೀಯರು ಅನುಮಾನಗೊಂಡು ಬುಧವಾರ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಅಲೀಂನನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಶವ ತುಂಡರಿಸಿ ಹೂತು ಹಾಕಿದ್ದ ಪಾಪಿ: ಮುಮ್ತಾಜ್ ಅವರನ್ನು ಹತ್ಯೆ ಮಾಡಿರುವ ಬಗ್ಗೆ ಅಲೀಂ ಶೇಖ್ ಬಾಯ್ಬಿಟ್ಟ ಬೆನ್ನಲ್ಲೇ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತನ್ನ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದು. ಬಳಿಕ ಶವವನ್ನು ಮೂರು ಭಾಗಗಳಾಗಿ ತುಂಡರಿಸಲಾಗಿತ್ತು. ಇದಾದ ನಂತರ ಶವದ ಭಾಗಗಳನ್ನು ಬಿಷ್ಣುಪುರದ ಸರ್ದಾ ಗಾರ್ಡನ್ ಪ್ರದೇಶದಲ್ಲಿರುವ ಕರೆಯ ಮಣ್ಣಿನಲ್ಲಿ ಹೂತು ಹಾಕಿರುವುದಾಗಿ ಪಾಪಿ ಪತಿ ಬಹಿರಂಗ ಪಡಿಸಿದ್ದಾನೆ.
ಅಂತೆಯೇ, ಪೊಲೀಸರು ಆರೋಪಿಯನ್ನು ಕರೆತಂದು ಶವವನ್ನು ವಶಪಡಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಇದೊಂದು ಯೋಜಿತ ಕೊಲೆಯಾಗಿದೆ. ಇದರಲ್ಲಿ ಅಲೀಂ ಹೊರತುಪಡಿಸಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
18 ವರ್ಷದ ಹಿಂದೆ ಮದುವೆಯಾಗಿದ್ದ ಮುಮ್ತಾಜ್ - ಅಲೀಂ: ಈ ಘಟನೆ ಬಗ್ಗೆ ಮೃತ ಮುಮ್ತಾಜ್ ಸಹೋದರಿ ಮನ್ವಾರ ಮಂಡಲ್ ಪ್ರತಿಕ್ರಿಯಿಸಿದ್ದು, ಅಲೀಂ ಮೂಲತಃ ಮುರ್ಷಿದಾಬಾದ್ ನಿವಾಸಿಯಾಗಿದ್ದಾನೆ. 18 ವರ್ಷಗಳ ಹಿಂದೆ ಮುಮ್ತಾಜ್ ಅವರನ್ನು ಅಲೀಂ ಶೇಖ್ಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾಳೆ ಎಂದು ತಿಳಿಸಿದ್ದಾರೆ.
ಮದುವೆಯ ನಂತರ ಬಿಷ್ಣುಪುರದ ಚಿತ್ಬಾಗಿ ಪ್ರದೇಶದಲ್ಲಿ ಮುಮ್ತಾಜ್ ಹಾಗೂ ಅಲೀಂ ವಾಸಿಸುತ್ತಿದ್ದರು. ಮುಮ್ತಾಜ್ ಸಮಲಿ ಪ್ರದೇಶದ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲೀಂ ಸರ್ದಾ ಗಾರ್ಡನ್ಸ್‌ನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ. ಮುಮ್ತಾಜ್ನನ್ನು ಕೊಂದ ಆರೋಪಿ ಅಲೀಂನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಮೃತ ಮುಮ್ತಾಜ್ ಸಹೋದರಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವೃದ್ಧ ಮಹಿಳೆಯರನ್ನು ಕೊಲೆಗೈದು ಶವದ ಜೊತೆ ಲೈಂಗಿಕ ಕ್ರಿಯೆ .. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಅರೆಸ್ಟ್