ಮಥುರಾ (ಉತ್ತರಪ್ರದೇಶ) : ವ್ಯಕ್ತಿಯೊಬ್ಬರ ಕೊಲೆ, ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ಬಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿಯುತ್ತಿರುವಾಗ ಶೂಟೌಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ದರ್ವಾಜಾ ನಿವಾಸಿ ಫಾರೂಖ್ ಹತನಾದ ವ್ಯಕ್ತಿ. ಫಾರೂಖ್ ತನ್ನ ಸಹಚರ ಮೊಹ್ಸಿನ್ ಎಂಬಾತನ ಜೊತೆ ಸೇರಿಕೊಂಡು ನವೆಂಬರ್ 4 ರಂದು ಉದ್ಯಮಿ ಕೃಷ್ಣ ಕುಮಾರ್ ಅಗರ್ವಾಲ್ ಮತ್ತು ಅವರ ಪತ್ನಿ ಕಲ್ಪನಾ ಅಗರ್ವಾಲ್ ಮೇಲೆ ದಾಳಿ ಮಾಡಿ, ಅವರ ನಿವಾಸದಲ್ಲಿ ಲೂಟಿ ಮಾಡಿದ್ದರು. ಈ ವೇಳೆ ಉದ್ಯಮಿ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಪತ್ನಿ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.
ಆರೋಪಿ ತಲೆಗೆ 50 ಸಾವಿರ: ಈ ಬಗ್ಗೆ ದೂರು ದಾಖಲಾಗಿದ್ದು, ಹೆದ್ದಾರಿ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಗಳಾದ ಫಾರೂಖ್ ಮತ್ತು ಮೊಹ್ಸಿನ್ ಬಂಧನಕ್ಕೆ ಜಾಲ ಬೀಸಿದ್ದರು. ಅಲ್ಲದೇ, ಫಾರೂಖ್ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ತಲೆಮರೆಸಿಕೊಂಡು ತಿರುಗುತ್ತಿದ್ದ ಫಾರೂಖ್ ಶನಿವಾರ ರಾತ್ರಿ (ನವೆಂಬರ್ 11)ದಂದು ಮಥುರಾದಲ್ಲಿ ಕಾಣಿಸಿಕೊಂಡ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಪತ್ತೆ ಮಾಡಿದ್ದರು.
ಪೊಲೀಸರು ಆತನ ಬಂಧನಕ್ಕೆ ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಫಾರೂಖ್ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಆರೋಪಿಗಳಿಂದ ದರೋಡೆ ಹಣ ವಶ: ಮಥುರಾ ಎಸ್‌ಎಸ್‌ಪಿ ಸೈಲೇಶ್ ಕುಮಾರ್ ಪಾಂಡೆ ಮಾತನಾಡಿ, ಶನಿವಾರ ರಾತ್ರಿ ಹೆದ್ದಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ಬಳಿ ಆರೋಪಿ ಫಾರೂಖ್ ಕಾಣಿಸಿಕೊಂಡಾಗ, ಪೊಲೀಸರು ಬಂಧನಕ್ಕೆ ಹೋದಾಗ ಆತ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಎನ್‌ಕೌಂಟರ್ ಮಾಡಿದ್ದು, ಫಾರೂಖ್ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 10 ರಂದು ಪೊಲೀಸರು ಇನ್ನೊಬ್ಬ ಆರೋಪಿ ಮೊಹ್ಸಿನ್ನನ್ನು ಬಂಧಿಸಿ ಆತನ ಬಳಿಯಿದ್ದ ಹಣವನ್ನು ವಶಪಡಿಸಿಕೊಂಡಿದ್ದರು. ಫಾರೂಖ್‌ನಿಂದ 21.8 ಲಕ್ಷ ರೂಪಾಯಿ, ಆಭರಣಗಳು ಮತ್ತು ಪಿಸ್ತೂಲ್ ಒಳಗೊಂಡ ಬ್ಯಾಗ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತ್ಯೇಕ ಪ್ರಕರಣ- ಕೋಚಿಂಗ್ ಸೆಂಟರ್ ಮಾಲೀಕನ ಹತ್ಯೆ: ಉತ್ತರಪ್ರದೇಶದ ಔನ್ಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್ ಸೆಂಟರ್ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ. ಅಜಯ್ ಕುಶ್ವಾಹ್ ಕೊಲೆಯಾದ ಕೋಚಿಂಗ್ ಸೆಂಟರ್ ಮಾಲೀಕ. ಭಾನುವಾರ ಕೋಚಿಂಗ್ ಸೆಂಟರ್ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅಜಯ್ ಅವರ ಎದೆಗೆ ಗುಂಡಿಕ್ಕಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕೋಚಿಂಗ್ ಸೆಂಟರ್ ಮಾಲೀಕನ ಎದೆಗೆ ಗುಂಡಿಕ್ಕಿ ಹತ್ಯೆ