ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾನವೀಯತೆ ಮೆರೆದು ಸುದ್ದಿಯಾಗಿದ್ದಾರೆ. ತಾವಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಮಹಿಳಾ ಪತ್ರಕರ್ತೆಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲು ತಮ್ಮ ಕಾರನ್ನೇ ಕೊಟ್ಟ ಸಿಎಂ, ತಾವು ಬೈಕ್‌ನಲ್ಲಿ ಕುಳಿತು ಕಚೇರಿಗೆ ತೆರಳಿದರು.
ಕುಸ್ತಿಪಟುಗಳನ್ನು ಬೆಂಬಲಿಸಿ ಮಮತಾ ಬ್ಯಾನರ್ಜಿ ಬುಧವಾರ ಮತ್ತು ಗುರುವಾರ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಮೊದಲಿಗೆ ಗೋಸ್ಟಾ ಬೆಹಾರಿ ಪಾಲರ ಪ್ರತಿಮೆಯ ಕೆಳಗೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಗಾಂಧಿ ಪ್ರತಿಮೆಯವರೆಗೆ ಕ್ಯಾಂಡಲ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಿಎಂ ಗಾಂಧಿ ಪ್ರತಿಮೆಯತ್ತ ತೆರಳುತ್ತಿದ್ದಂತೆ ಇದ್ದಕ್ಕಿದ್ದಂತೆ ಪ್ರಮುಖ ಸುದ್ದಿ ವಾಹಿನಿಯ ಫೋಟೋ ಜರ್ನಲಿಸ್ಟ್ ಸುಭ್ರಾಂಶು ಘೋಷ್ ಎಂಬವರು ಅಸ್ವಸ್ಥರಾಗಿ ಕೆಳಗೆ ಬಿದ್ದರು. ಇದನ್ನು ಗಮನಿಸಿದ ಸಿಎಂ ಕೂಡಲೇ ಅವರ ಬಳಿ ತೆರಳಿ ಆರೋಗ್ಯ ವಿಚಾರಿಸಿದರು.
ಭದ್ರತಾ ಸಿಬ್ಬಂದಿ ಪತ್ರಕರ್ತೆಯನ್ನು ಎತ್ತಿಕೊಂಡರು. ಮಮತಾ ಬ್ಯಾನರ್ಜಿ ನೀರು ಕುಡಿಸಿದರು. ಸಚಿವ ಅರುಪ್ ಬಿಸ್ವಾಸ್ ಮತ್ತು ಇತರ ಕ್ರೀಡಾಪಟುಗಳು ಅವರೊಂದಿಗಿದ್ದರು. ಇದಾದ ನಂತರ ಮಮತಾ ಅವರು ತಮ್ಮ ಕಾರಿನಲ್ಲಿ ಛಾಯಾಗ್ರಾಹಕಿಯನ್ನು ಆಸ್ಪತ್ರೆಗೆ ಕಳುಹಿಸಿದರು. ಮೇಣದಬತ್ತಿಯ ಮೆರವಣಿಗೆ ಗಾಂಧಿ ಪ್ರತಿಮೆ ಬಳಿ ಕೊನೆಗೊಂಡಿತು. ಮುಖ್ಯಮಂತ್ರಿಗಳು ತಮ್ಮ ಭದ್ರತಾ ಸಿಬ್ಬಂದಿಯೊಬ್ಬರ ಬೈಕ್‌ನಲ್ಲಿ ತಮ್ಮ ಕಚೇರಿಗೆ ತೆರಳಿದರು. ಕಾರ್ಯಕ್ರಮ ಮುಗಿದ ನಂತರ ಸ್ವತಃ ಎಸ್ಎಸ್ಕೆಎಂ ಆಸ್ಪತ್ರೆಗೆ ತೆರಳಿ ಪತ್ರಕರ್ತೆಯ ಆರೋಗ್ಯವನ್ನು ಮತ್ತೊಮ್ಮೆ ವಿಚಾರಿಸಿದರು.
ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹ: ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಬೆಂಬಲಕ್ಕೆ ಮಮತಾ ಬ್ಯಾನರ್ಜಿ ನಿಂತಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ. ಕುಸ್ತಿಪಟುಗಳು ತಮ್ಮ ಆಂದೋಲನವನ್ನು ಮುಂದುವರಿಸಬೇಕು. ಈ ಹೋರಾಟ ಜೀವನಕ್ಕಾಗಿ, ಸ್ವಾತಂತ್ರ್ಯಕ್ಕಾಗಿ, ಮಾನವ ನ್ಯಾಯಕ್ಕಾಗಿ ನಡೆಯಲಿ ಎಂದು ಮಮತಾ ಘೋಷಿಸಿದ್ದಾರೆ.
ಇದನ್ನೂ ಓದಿ: ಕುಸ್ತಿಪಟುಗಳ ಬಂಧನ ದೃಶ್ಯ ಕಂಡ ನನಗೆ ನಿನ್ನೆ ರಾತ್ರಿ ನಿದ್ರೆ ಬಂದಿಲ್ಲ: ಅಭಿನವ್ ಬಿಂದ್ರಾ
ಜೂನ್ 5 ರಂದು ಸ್ವಾಮೀಜಿಗಳಿಂದ ಪ್ರತಿಭಟನೆ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬೆಂಬಲಿಸಿ ಜೂನ್ 5 ರಂದು ರ‍್ಯಾಲಿ ನಡೆಸುವುದಾಗಿ ಉತ್ತರ ಪ್ರದೇಶದ ಅಯೋಧ್ಯೆ ಸ್ವಾಮೀಜಿಗಳ ಗುಂಪು ಪ್ರಕಟಿಸಿದೆ. ಅಲ್ಲದೇ, ಅನೇಕ ಲೋಪದೋಷದಿಂದ ಕೂಡಿದೆ ಎಂದು ಹೇಳಲಾಗುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವರು ಲೈಂಗಿಕ ಕಿರುಕುಳದ ಆರೋಪ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಬ್ರಿಜ್ ಭೂಷಣ್ ಅವರನ್ನು ಬೆಂಬಲಿಸಿ ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಅಯೋಧ್ಯೆಯ ಪ್ರಮುಖರು ಮತ್ತು ದೇಶದ ಇತರ ಧಾರ್ಮಿಕ ಸ್ಥಳಗಳಿಂದ ಬರುವ ಮುಖಂಡರು ರ‍್ಯಾಲಿ ನಡೆಸುವುದಾಗಿ ಮಹಂತ್ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.