ನಂದಿಗ್ರಾಮ (ಪಶ್ಚಿಮ ಬಂಗಾಳ): ನೆನಪಿಡಿ, ನಾನು ಒಮ್ಮೆ ನಂದಿಗ್ರಾಮ ಪ್ರವೇಶಿಸಿದರೆ, ಇದನ್ನು ತೊರೆಯೋ ಮಾತೇ ಇಲ್ಲ. ನಂದಿಗ್ರಾಮ ನನ್ನ ಸ್ಥಳ, ನಾನು ಇಲ್ಲಿಯೇ ಇರುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾನ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿರುವ ನಂದಿಗ್ರಾಮ ಕ್ಷೇತ್ರದಲ್ಲಿ ವ್ಹೀಲ್ಚೇರ್ ಮೂಲಕ ಪಾದಯಾತ್ರೆ ನಡೆಸಿದ ದೀದಿ, ಸೋನಾ ಚುರಾದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ನಾನು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು. ಆದರೆ, ಈ ಸ್ಥಳದ ತಾಯಂದಿರು ಮತ್ತು ಸಹೋದರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ನಾನು ನಂದಿಗ್ರಾಮವನ್ನು ಆರಿಸಿದ್ದೇನೆ. ನಂದಿಗ್ರಾಮ ಚಳವಳಿಗೆ ನಮಸ್ಕರಿಸಲು ನಾನು ಸಿಂಗೂರ್ ಬದಲಾಗಿ ನಂದಿಗ್ರಾಮದಿಂದ ಕಣಕ್ಕಿಳಿದಿರುವೆ ಎಂದರು.
ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ರಾಜಕೀಯವಾಗಿ ಹೂತುಹಾಕಿ ಮತ್ತು ಅವರನ್ನು ನಂದಿಗ್ರಾಮ ಮತ್ತು ಪಶ್ಚಿಮ ಬಂಗಾಳದಿಂದ ಓಡಿಸಿ. ಚುನಾವಣೆಯ ಸಮಯದಲ್ಲಿ ನಿಮ್ಮ ಮತಗಳನ್ನು ಶಾಂತಿಯುತವಾಗಿ ಚಲಾಯಿಸಿ. ನೆನಪಿನಲ್ಲಿಡಿ, 'ಕೂಲ್ ಕೂಲ್ ತೃಣಮೂಲ, ಥಂಡಾ ಥಂಡಾ ಕೂಲ್ ಕೂಲ್, ಜೋಡಾ ಫೂಲ್ (ಟಿಎಂಸಿ ಚಿಹ್ನೆ)ಗೆ ವೋಟ್ ಮಾಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ರಾಜ್ಯದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತದ ಚುನಾವಣೆ ನಡೆದಿದ್ದು, ಶೇ. 79.79 ರಷ್ಟು ಮತದಾನವಾಗಿದೆ. ಮೇ 2 ರಂದು ಫಲಿತಾಂಶ ಹೊರ ಬೀಳಲಿದೆ.