ಕೋಲ್ಕತ್ತಾ (ಪಶ್ಚಿಮ ಬಂಗಾಳ): 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಪ್ರತಿಪಕ್ಷಗಳು ಒಟ್ಟಾಗಿ ಕೈಜೋಡಿಸಲಿವೆ. ಬಿಹಾರ ಸಿಎಂ ನಿತೀಶ್ ಕುಮಾರ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಹಾಗೂ ನಾನು ಸೇರಿದಂತೆ ಅನೇಕ ಪ್ರತಿಪಕ್ಷಗಳು ಹೋರಾಡಲಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕೋಲ್ಕತ್ತಾದ ನೇತಾಜಿ ಕ್ರೀಡಾಂಗಣದಲ್ಲಿ ಇಂದು ನಡೆದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಲು ಎಲ್ಲ ಪ್ರತಿಪಕ್ಷಗಳು ಕೈಜೋಡಿಸಲಿವೆ. ಎಲ್ಲ ಪ್ರತಿಪಕ್ಷಗಳು ಒಂದು ಕಡೆಯಾದರೆ, ಮತ್ತೊಂದೆಡೆ ಬಿಜೆಪಿ. ಬಿಜೆಪಿ ತನ್ನ ದುರಹಂಕಾರ ಮತ್ತು ಜನರ ಕೋಪದಿಂದಲೇ ಸೋಲನ್ನು ಎದುರಿಸಬೇಕಾಗುತ್ತದೆ. 300 ಸೀಟುಗಳನ್ನು ಗೆಲ್ಲಲಾಗಿದೆ ಎಂಬ ಬಿಜೆಪಿಯ ದುರಹಂಕಾರವೇ ಅದಕ್ಕೆ ಮುಳುವಾಗಲಿದೆ. 2024ರಲ್ಲಿ ಖೇಲಾ ಹೋಬೆ (ಆಟ ಶುರು) ಎಂದು ಮಮತಾ ಹೇಳಿದರು.
ಇದನ್ನೂ ಓದಿ: ಭಾರತ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವುದು ಅಸಾಮಾನ್ಯ ಸಾಧನೆ: ಪ್ರಧಾನಿ ಮೋದಿ ಬಣ್ಣನೆ
ಸಾಕಷ್ಟು ಗಮನ ಸೆಳೆದಿದ್ದ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಖೇಲಾ ಹೋಬೆ ಎಂಬುದು ಟಿಎಂಸಿಯ ಘೋಷಣೆಯಾಗಿತ್ತು. ಇದರಲ್ಲಿ ಬಿಜೆಪಿಯನ್ನು ಸೋಲಿಸಿ ಟಿಎಂಸಿ ಸತತ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಮರಳಿತ್ತು. ಇದೇ ಘೋಷಣೆಯನ್ನು ಲೋಕಸಭೆ ಚುನಾವಣೆಗೂ ಮಮತಾ ಮಾಡಿದ್ದಾರೆ.
ಅಮಿತ್ ಶಾ ನಿಷ್ಪ್ರಯೋಜಕ ಸಚಿವ: ಕೇಂದ್ರ ಸರ್ಕಾರದ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಮೋದಿ ಸಂಪುಟದಲ್ಲಿ ಉಳಿದ ಎಲ್ಲರಿಗಿಂತಲೂ ಅಮಿತ್ ಶಾ ಅತ್ಯಂತ ನಿಷ್ಪ್ರಯೋಜಕ ಎಂದು ಟೀಕಿಸಿದರು. ಅಲ್ಲದೇ, ಸಿಬಿಐ ಮತ್ತು ಇಡಿ ಮೂಲಕ ಬೆದರಿಕೆ ಹಾಕಬಹುದು ಎಂದು ಬಿಜೆಪಿ ಭಾವಿಸಿದೆ. ಇಂತಹ ಕುತಂತ್ರಗಳನ್ನು ಅನುಸರಿಸಿದಷ್ಟೂ ಅವರು (ಬಿಜೆಪಿಯವರು) ಮುಂದಿನ ವರ್ಷದ ಪಂಚಾಯಿತಿ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಹತ್ತಿರವಾಗುತ್ತಾರೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತ ಭೇಟಿ ವೇಳೆ ತಮಗೆ ಆಹ್ವಾನ ನೀಡದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಬಂಗಾಳ ಸಿಎಂ, ನಾನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಆದರೆ, ಹಸೀನಾ ಭೇಟಿಯ ಭಾಗವಾಗಲು ನನ್ನನ್ನು ಆಹ್ವಾನಿಸಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಾನು ಬಾಹ್ಯ ವ್ಯವಹಾರಗಳು ಅಥವಾ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ, ಯಾವುದೇ ವಿದೇಶಕ್ಕೆ ನನ್ನನ್ನು ಆಹ್ವಾನಿಸಿದಾಗಲೂ ಕೇಂದ್ರವು ನನ್ನನ್ನು ತಡೆಯಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ವಿದೇಶಿ ಗಣ್ಯರನ್ನು ಭೇಟಿಯಾಗುವುದು ಕೇಂದ್ರ ಸರ್ಕಾರಕ್ಕೆ ಏಕೆ ಚಿಂತೆ ಇದೆ ಎಂದು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಕೇಳಿದರು.
ಇದನ್ನೂ ಓದಿ: ಏಳು ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾ ಸಹಿ: ವಿರೋಧಿ ಶಕ್ತಿಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದ ಪ್ರಧಾನಿ ಮೋದಿ