ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ಬಜೆಟ್ ಮಂಡನೆ ಮಾಡಿ ಭರ್ಜರಿ ಯೋಜನೆ ಘೋಷಣೆ ಮಾಡಿದ್ದಾರೆ.
ಒಟ್ಟು 2,99,688 ಕೋಟಿ ರೂ ಮೊತ್ತದ ಬಜೆಟ್ ಮಂಡನೆ ಮಾಡಿರುವ ಮಮತಾ ಬ್ಯಾನರ್ಜಿ, 100 ಕೋಟಿ ರೂ. ವೆಚ್ಚದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ನೇತಾಜಿಯವರ ಜೈ ಹಿಂದ್ ಘೋಷಣೆ ನೆನಪಿಗಾಗಿ ಪ್ರತಿ ಜಿಲ್ಲೆಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಜೈಹಿಂದ್ ಭವನ ಸ್ಥಾಪಿಸುವುದಾಗಿಯೂ ಹೇಳಿದ್ದಾರೆ. ಈ ಮೂಲಕ ನೇತಾಜಿ ಹೆಸರಿನಲ್ಲಿ ಚುನಾವಣಾ ಱಲಿ ನಡೆಸುತ್ತಿರುವ ಬಿಜೆಪಿ ತಂತ್ರಕ್ಕೆ ದೀದಿ ಪ್ರತಿತಂತ್ರ ಮಾಡಿದ್ದಾರೆ.
ಓದಿ: ತೆಲಂಗಾಣದಲ್ಲಿ ಇಂದಿನಿಂದ ಭದ್ರತಾ ಸಿಬ್ಬಂದಿಗೆ ಕೋವಿಡ್ ಲಸಿಕೆ
ಬಜೆಟ್ನಲ್ಲಿ ಮೂಲ ಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಉಚಿತ ಪಡಿತರ ಯೋಜನೆ ಮುಂದುವರೆಯಲಿದ್ದು, ಸಬ್ಸಿಡಿಯಲ್ಲಿ ಆರೋಗ್ಯ ಸೇವೆ ನೀಡುವ ಭರವಸೆ ನೀಡಿದ್ದಾರೆ.
ಬಜೆಟ್ನಲ್ಲಿ 46,000 ಕಿಲೋ ಮೀಟರ್ ಗ್ರಾಮೀಣ ರಸ್ತೆ ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿರುವ ಮಮತಾ, ಅದಕ್ಕಾಗಿ 2,475 ಕೋಟಿ ರೂ ಮೀಸಲಿಟ್ಟಿದ್ದಾರೆ. ಚುನಾವಣೆ ದೃಷ್ಠಿಯಿಂದ ಬಡವರು, ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯ ಹಣಕಾಸು ಸಚಿವ ಅಮಿತ್ ಮಿತ್ರಾ ಅನಾರೋಗ್ಯದ ಕಾರಣ ಮಮತಾ ಬ್ಯಾನರ್ಜಿ ಬಜೆಟ್ ಮಂಡನೆ ಮಾಡಿದ್ದು, ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.