ನವದೆಹಲಿ : ವಿಮಾನ ಪ್ರಯಾಣ ಅತ್ಯಂತ ಸುಖಕರ ಎಂಬ ಮಾತಿದೆ. ಬೇರೆ ಸಾರಿಗೆಗಳಿಗಿಂತ ಹೆಚ್ಚು ವೆಚ್ಚ ತಗಲುವ ಪ್ರಯಾಣ ವ್ಯವಸ್ಥೆಯಲ್ಲಿ ಜನರಿಂದ ಉತ್ತಮ ವರ್ತನೆಗಳನ್ನೂ ನಿರೀಕ್ಷೆ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ಬಸ್, ರೈಲು ಪ್ರಯಾಣಕ್ಕಿಂತಲೂ ಕೆಟ್ಟ ಅನುಭವಗಳನ್ನು ವಿಮಾನ ಪ್ರಯಾಣಿಕರು ಅನುಭವಿಸುತ್ತಾರೆ. ಇದಕ್ಕೊಂದು ಉದಾಹರಣೆ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಈ ಘಟನೆ.
ಕಳೆದ ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ತನ್ನ ಮಹಿಳಾ ಸಹ ಪ್ರಯಾಣಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅನಾಗರಿಕ ವರ್ತನೆ ತೋರಿದ್ದಾನೆ. ಈ ಘಟನೆ ಸಂಬಂಧ ಆಕೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಮಾನದ ಬ್ಯುಸಿನೆಸ್ ಕ್ಲಾಸ್ನಲ್ಲಿ ಘಟನೆ: ಬ್ಯುಸಿನೆಸ್ ಕ್ಲಾಸ್ನಲ್ಲಿ ಘಟನೆ ನಡೆದಿದೆ. ಪುರುಷ ಪ್ರಯಾಣಿಕ ಪಾನಮತ್ತನಾಗಿದ್ದನು ಎನ್ನಲಾಗಿದೆ. ಏರ್ ಇಂಡಿಯಾ ಅಧಿಕಾರಿಗಳು ಘಟನೆಯಲ್ಲಿ ಖಚಿತಪಡಿಸಿದ್ದಾರೆ. ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್.ಚಂದ್ರಶೇಖರ್ ಅವರಿಗೂ ಪತ್ರದ ಮೂಲಕ ದೂರು ಕೊಟ್ಟಿದ್ದಾರೆ. 'ವ್ಯಕ್ತಿಯ ವರ್ತನೆ ಕುರಿತು ಕ್ಯಾಬಿನ್ ಸಿಬ್ಬಂದಿಗೂ ತಿಳಿಸಿದ್ದೆ. ಅವರು ಘಟನೆಯನ್ನು ನಿರ್ವಹಿಸಲು ಸಿದ್ದರಾಗಿರಲಿಲ್ಲ. ನನ್ನ ರಕ್ಷಣೆಗೆ ಏರ್‌ಲೈನ್ಸ್ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಇದರಿಂದಾಗಿ ನಾನು ಆಘಾತಕ್ಕೊಳಗಾಗಿದ್ದೇನೆ' ಎಂದು ಉಲ್ಲೇಖಿಸಿದ್ದಾರೆ.
ಆರೋಪಿ ಪ್ರಯಾಣಿಕನ ವಿರುದ್ಧ ಕ್ರಮಕ್ಕೆ ಒತ್ತಾಯ: 'ಏರ್ ಇಂಡಿಯಾ ವಿಮಾನ ಎಐ-102 ನ.26ರಂದು ನ್ಯೂಯಾರ್ಕ್ನಿಂದ ಮಧ್ಯಾಹ್ನ 1ಗಂಟೆಗೆ ಹೊರಟಿತ್ತು. ಊಟದ ಬಳಿಕ ವಿಮಾನದಲ್ಲಿ ಲೈಟ್ಗಳನ್ನು ಆಫ್ ಮಾಡಲಾಗಿತ್ತು. ಆಗ ಹಿರಿಯ ನಾಗರಿಕರೊಬ್ಬರು ನನ್ನ ಬಳಿ ಬಂದು ಪ್ಯಾಂಟ್ ಜಿಪ್ ತೆಗೆದು ಮೂತ್ರ ವಿಸರ್ಜನೆಗೆ ಮುಂದಾದರು. ಸಹ ಪ್ರಯಾಣಿಕರು ಆತನಿಗೆ ಗದರಿದ ಬಳಿಕ ಹೊರಹೋದರು. ಆಗ, ನನ್ನ ಬಟ್ಟೆ, ಬೂಟುಗಳು ಮತ್ತು ಬ್ಯಾಗ್ ಮೂತ್ರದ ವಾಸನೆ ಬರುತ್ತಿತ್ತು' ಎಂದು ಅವರು ತಿಳಿಸಿದ್ದಾರೆ.
ಇದಾದ ಬಳಿಕ ಕ್ಯಾಬಿನ್ ಸಿಬ್ಬಂದಿ ಹೊಸ ಬಟ್ಟೆಗಳನ್ನು ನೀಡಿ, ಬೇರೆ ಆಸನದ ವ್ಯವಸ್ಥೆ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ದುರ್ವರ್ತನೆ ತೋರಿದ ವ್ಯಕ್ತಿಯನ್ನು ಸಂಬಂಧಪಟ್ಟ ವ್ಯಕ್ತಿಗಳ ವಶಕ್ಕೆ ನೀಡಲಾಯಿತು ಎಂದು ಏರ್‌ಲೈನ್ಸ್ ಮೂಲಗಳು ಮಾಹಿತಿ ನೀಡಿವೆ. ಏರ್ ಇಂಡಿಯಾ ಪ್ರತಿಕ್ರಿಯಿಸಿ, 'ಪೊಲೀಸರಿಗೆ ಮತ್ತು ನಿಯಂತ್ರಣ ಅಧಿಕಾರಿಗಳಿಗೆ ವರದಿ ನೀಡಿದ್ದೇವೆ. ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ' ಎಂದು ತಿಳಿಸಿದೆ.
ಆರೋಪಿಯನ್ನು 'ನೋ ಫ್ಲೈ ಲಿಸ್ಟ್'ಗೆ ಸೇರಿಸಲು ಶಿಫಾರಸು: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಏರ್ ಇಂಡಿಯಾ, ಪ್ರಕರಣದ ತನಿಖೆಗೆ ಆಂತರಿಕ ಸಮಿತಿ ರಚಿಸಿದ್ದು, ಆರೋಪಿ ಪುರುಷ ಪ್ರಯಾಣಿಕನನ್ನು ನೋ ಫ್ಲೈ ಲಿಸ್ಟ್ (ವಿಮಾನದಲ್ಲಿ ಪ್ರಯಾಣಿಸಲು ಯೋಗ್ಯ ವ್ಯಕ್ತಿಯಲ್ಲ) ಎಂಬ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದೆ. ಆದ್ರೆ, ಈ ವಿಷಯ ಸರ್ಕಾರದ ಸಮಿತಿಯ ಮುಂದಿದ್ದು, ನಿರ್ಧಾರವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ: ಒಂದೇ ಶೌಚ ಕೋಣೆಯಲ್ಲಿ ಎರಡು ಕಮೋಡ್ಗಳು!