ಮಾಲ್ಡಾ (ಪಶ್ಚಿಮ ಬಂಗಾಳ) : ಈ ಬಾರಿಯ ದುರ್ಗಾ ಪೂಜೆಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೋಲುವ ದುರ್ಗಾದೇವಿ ವಿಗ್ರಹವನ್ನು ತಯಾರಿಸಲಾಗಿದೆ ಎಂದು ಅಲ್ಲಿನ ದುರ್ಗಾ ಪೂಜೆ ಆಯೋಜಕ ಸಮಿತಿಯೊಂದು ತಿಳಿಸಿದೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
ಮಮತಾ ಅವರ ಮುಖ ಮಾತ್ರವಲ್ಲ, ಅವರು ಮುಖ್ಯಮಂತ್ರಿಯಾಗಿ ಧರಿಸುವ ಬಿಳಿ ಮತ್ತು ನೀಲಿ ಬಣ್ಣದ ಸೀರೆಯನ್ನು ಈ ವಿಗ್ರಹ ಹೊಂದಿದೆ. ಎರಡು ಕೈಗಳಲ್ಲಿ ಗಣೇಶನ ಮೂರ್ತಿಯನ್ನು ಹಾಗೂ ಉಳಿದ ಎಂಟು ಕೈಗಳು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಫಲಕಗಳನ್ನು ಹಿಡಿದಿರುವ ಈ ಮೂರ್ತಿಯನ್ನು ಮಾಲ್ಡಾ ಜಿಲ್ಲೆಯ ಹರಿಶ್ಚಂದ್ರಪುರದ 'ಜಾಗರಣ ಸಂಘ' ಎಂಬ ಗಣೇಶ ಹಾಗೂ ದುರ್ಗಾ ಪೂಜಾ ಸಮಿತಿ ತಯಾರಿಸಿದೆ.
ನಿನ್ನೆ ವಿಗ್ರಹ ಉದ್ಘಾಟನಾ ಸಮಾರಂಭ ನಡೆದಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಶ್ವಜಿತ್ ಮಂಡಲ್ ಮತ್ತು ಟಿಎಂಸಿ ಮಾಲ್ಡಾ ಜಿಲ್ಲಾಧ್ಯಕ್ಷ ಜಮ್ಮು ರೆಹಮಾನ್ ಉಪಸ್ಥಿತರಿದ್ದರು. ಈ ಬಗ್ಗೆ ಕಿಡಿ ಕಾರಿರುವ ಮಾಲ್ಡಾ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಿಶನ್ ಕೇಡಿಯಾ, ದುರ್ಗಾದೇವಿಯನ್ನು ಮುಖ್ಯಮಂತ್ರಿಯೊಂದಿಗೆ ಹೋಲಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಜನರು ಒಪ್ಪುವುದಿಲ್ಲ.
ಮುಖ್ಯಮಂತ್ರಿಯವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಾಯಿಯಾಗಬಹುದು. ಆದರೆ, ಅವರು ಯಾವುದೇ ಹಿಂದೂ ದೇವರ ತಾಯಿಯಾಗಲು ಸಾಧ್ಯವಿಲ್ಲ. ಇದಕ್ಕೆ ಸಿಎಂ ಮಮತಾ ಹೇಗೆ ಅನುಮತಿ ನೀಡಿದರು ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.