ಹೈದರಾಬಾದ್ : 2015ನೇ ಇಸವಿಯಿಂದ ಈವರೆಗ ಸಂಭವಿಸಿದ ಕೆಲ ಪ್ರಮುಖ ಹಾಗೂ ಭೀಕರ ಬಸ್ ಅಪಘಾತಗಳ ಪಟ್ಟಿ ಇಲ್ಲಿದೆ.
16.02.21, ಮಧ್ಯಪ್ರದೇಶ : ಇಲ್ಲಿನ ಸಿಧಿ ಜಿಲ್ಲೆಯಲ್ಲಿ ಪ್ಯಾಸೆಂಜರ್ ಬಸ್ ಕಾಲುವೆಗೆ ಧುಮುಕಿದ ಪರಿಣಾಮ ಕನಿಷ್ಠ 49 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ತಮ್ಮ ಆಸನಗಳಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಇಪ್ಪತ್ತು ಮಹಿಳೆಯರು ಸೇರಿದ್ದಾರೆ.
ಅವರಲ್ಲಿ ಹೆಚ್ಚಿನವರು 140 ಕಿ.ಮೀ ದೂರದಲ್ಲಿರುವ ಸತ್ನಾ ಪಟ್ಟಣದಲ್ಲಿ ಎಎನ್‌ಎಂ ಪರೀಕ್ಷೆಗೆ ಹಾಜರಾಗಲು ಹೊರಟಿದ್ದರು. ಬಲಿಯಾದವರಲ್ಲಿ ಅರ್ಧದಷ್ಟು ಜನ ಮಹಿಳೆಯರೊಂದಿಗೆ ಬಂದಿದ್ದ ಅವರ ತಂದೆ ಮತ್ತು ಸಹೋದರರಾಗಿದ್ದರು.
ಸಾವನ್ನಪ್ಪಿದವರಲ್ಲಿ 3 ತಿಂಗಳ ಮಗು ಸೇರಿ ಇಬ್ಬರು ಮಕ್ಕಳಿದ್ದಾರೆ. ಬೆಳಗ್ಗೆ 7: 30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಾಲುವೆಗೆ ಬಿದ್ದಿದ್ದು, 50ಕ್ಕೂ ಅಧಿಕ ಪ್ರಯಾಣಿಕರು ಬಸ್‌ನಲ್ಲಿದ್ದರು.
20.02.20, ತಮಿಳುನಾಡು : ಮೂರು ಭೀಕರ ಅಪಘಾತಗಳಲ್ಲಿ 20 ಜನ ಸಾವನ್ನಪ್ಪಿದ್ದರು. 45 ಪ್ರಯಾಣಿಕರಿದ್ದ ಕೊಚ್ಚಿ ಮೂಲದ ಕೇರಳ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್ ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ 20 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಕೊಯಮತ್ತೂರು ಬಳಿ ಮುಂಜಾನೆ 3ರ ಸುಮಾರಿಗೆ ನಡೆದ ಘಟನೆಯಲ್ಲಿ ಇತರ 23 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿತ್ತು.
26.02.20, ರಾಜಸ್ಥಾನ : ಬುಂಡಿ ಜಿಲ್ಲೆಯಲ್ಲಿ ಪ್ರಯಾಣಿಕರು ತುಂಬಿದ ಬಸ್ ನದಿಗೆ ಬಿದ್ದು 24 ಜನರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದರು. ಬಸ್ ಮದುವೆಯ ದಿಬ್ಬಣಕ್ಕೆ ಹೊರಟಿತ್ತು. ಬುಂಡಿ ಜಿಲ್ಲೆಯ ಲಖೇರಿ ಪಟ್ಟಣದಲ್ಲಿ ಈ ಘಟನೆ ನಡೆದಿತ್ತು.
24.11.18, ಕರ್ನಾಟಕ : ಮಂಡ್ಯ ಜಿಲ್ಲೆಯಲ್ಲಿ ಬಸ್ ಕಾಲುವೆಗೆ ನುಗ್ಗಿ ಕನಿಷ್ಠ 30 ಪ್ರಯಾಣಿಕರು ಸಾವನ್ನಪ್ಪಿದ್ದರು. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಕಾವೇರಿ ನದಿಯ ಕಾಲುವೆಯಲ್ಲಿ ಈ ಘಟನೆ ನಡೆದಿತ್ತು. ಮೃತಪಟ್ಟವರಲ್ಲಿ ಹೆಚ್ಚಿನವರು ಶಾಲಾ ವಿದ್ಯಾರ್ಥಿಗಳು. 35 ಪ್ರಯಾಣಿಕರನ್ನು ಹೊತ್ತ ಬಸ್ 12 ಅಡಿ ಆಳದ ನೀರಿನಲ್ಲಿ ಸಂಪೂರ್ಣ ಮುಳುಗಿತ್ತು.
11.09.18, ತೆಲಂಗಾಣ : ಜಗ್ತಿಯಲ್ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ ಬಸ್ಸೊಂದು ಬೆಟ್ಟದ ಕಣಿವೆಗೆ ಬಿದ್ದ ಪರಿಣಾಮ, 52 ಜನರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದರು.
18.08.2018, ಮಧ್ಯಪ್ರದೇಶ : ಸಿಡಿ ಜಿಲ್ಲೆಯ ಜೋಗದಾ ಸೇತುವೆಯಲ್ಲಿ ಸಾಗುತ್ತಿದ್ದ ಮಿನಿ ಟ್ರಕ್ 100 ಅಡಿ ಕೆಳಗೆ ಸನ್ ನದಿಗೆ ಬಿದ್ದ ಪರಿಣಾಮ ಮದುವೆಗೆ ಹೋಗುತ್ತಿದ್ದ 21 ಜನರು ಸಾವನ್ನಪ್ಪಿ, ಸುಮಾರು 20 ಮಂದಿ ಗಾಯಗೊಂಡಿದ್ದರು.
29.01.18, ಪಶ್ಚಿಮ ಬಂಗಾಳ : ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮುಂಜಾನೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಬಸ್ ಆಳವಾದ ಕಾಲುವೆಯಲ್ಲಿ ಬಿದ್ದು 36 ಜನರು ಮೃತಪಟ್ಟಿದ್ದರು. ನಾಡಿಯಾ ಜಿಲ್ಲೆಯ ಕರೀಂಪುರದಿಂದ ಮಾಲ್ಡಾ ಜಿಲ್ಲೆಗೆ ಬಸ್ ಪ್ರಯಾಣಿಸುತ್ತಿತ್ತು.
23.12.17, ರಾಜಸ್ಥಾನ : ಸವಾಯಿ ಮಾಧೋಪುರದ ದುಬಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೇತುವೆಯಿಂದ ನದಿಗೆ ಬಿದ್ದು 33 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು.
ಎಲ್ಲಾ ಪ್ರಯಾಣಿಕರು ಹಿಂದೂನ್ ನಗರದ ಸವಾಯಿ ಮಾಧೋಪುರದ ಮಲಾನಾ ದಾಬಿ ಪ್ರದೇಶದ ದೇವಸ್ಥಾನಕ್ಕೆ ತೀರ್ಥಯಾತ್ರೆಗೆ ಹೋಗುತ್ತಿದ್ದರು. ಮುಂಜಾನೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ 100 ಅಡಿ ಎತ್ತರದ ಸೇತುವೆಯಿಂದ ಮೊರೆಲ್ ನದಿಗೆ ಬಿದ್ದು ಈ ಘಟನೆ ನಡೆದಿತ್ತು.
19.04.2017, ಹಿಮಾಚಲ ಪ್ರದೇಶ : ಶಿಮ್ಲಾ ಜಿಲ್ಲೆಯಲ್ಲಿ ಬಸ್ ನದಿಗೆ ಬಿದ್ದು 44 ಮಂದಿ ಮೃತಪಟ್ಟಿದ್ದರು. 56 ಪ್ರಯಾಣಿಕರಿದ್ದ ಬಸ್ ನದಿಗೆ ಬಿದ್ದಿತ್ತು.
24.05.2017, ಉತ್ತರಾಖಂಡ : ಭಾಗರಾತಿ ನದಿಗೆ ಬಸ್ ಬಿದ್ದು ಮಧ್ಯಪ್ರದೇಶದ 29 ಯಾತ್ರಿಕರು ಸಾವನ್ನಪ್ಪಿದ್ದರು. ಉತ್ತರಾಖಂಡದ ಧರಸು ಬಳಿ ಯಾತ್ರಿಕರು ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
10.01.15, ಕರ್ನಾಟಕ : ಬಿಜಾಪುರ ಜಿಲ್ಲೆಯ ನಿಡುಗುಂಡಿಯಲ್ಲಿರುವ ಅಕಮಟ್ಟಿ ಅಣೆಕಟ್ಟು ಕಾಲುವೆಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಬಿದ್ದು 18 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 57 ಜನರು ಸಾವನ್ನಪ್ಪಿದ್ದರು. ಒಂಬತ್ತು ಪ್ರಯಾಣಿಕರು ಈಜಿ ಪಾರಾಗಿದ್ದರು.