ನವದೆಹಲಿ: ಅಕ್ಟೋಬರ್ 30, 2022 ರಂದು ಗುಜರಾತ್ನ ಮೋರ್ಬಿ ಪಟ್ಟಣದಲ್ಲಿರುವ ಸೇತುವೆ ಕುಸಿದು ಈವರೆಗೆ 141 ಜನ ಸಾವನ್ನಪ್ಪಿದ್ದಾರೆ ಮತ್ತು 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಮಚ್ಚು ನದಿಯ ಮೋರ್ಬಿ ಕೇಬಲ್ ಸೇತುವೆ ದುರಸ್ತಿ, ನಿರ್ವಹಣೆ ಕೊರತೆ, ಅವ್ಯವಹಾರ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ಕುಸಿದಿದೆ ಎಂದು ಹೇಳಲಾಗುತ್ತಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಈ ಸೇತುವೆ ಸಾಕಷ್ಟು ಹಳೆಯದಾಗಿತ್ತು ಎಂದು ಹೇಳಲಾಗುತ್ತಿದೆ. ಈ ಸೇತುವೆಯನ್ನು ದುರಸ್ತಿ ಬಳಿಕ 26 ಅಕ್ಟೋಬರ್ 2022 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಇದಕ್ಕೂ ಮುನ್ನ ಇದರ ಮೇಲೆ ಸಂಚಾರ ಬಂದ್ ಮಾಡಲಾಗಿತ್ತು ಮತ್ತು 6 ತಿಂಗಳ ದುರಸ್ತಿ ಕಾರ್ಯದ ಬಳಿಕ ಗುಜರಾತ್ ರಾಜ್ಯದ ಹೊಸ ವರ್ಷದಂದು ಜನರಿಗೆ ಮುಕ್ತಗೊಳಿಸಲಾಗಿತ್ತು.
ದೇಶಾದ್ಯಂತ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಸೇತುವೆಗೆ ಸಂಬಂಧಿಸಿದ ಅಪಘಾತಗಳ ಪಟ್ಟಿ ಇಲ್ಲಿದೆ ನೋಡಿ:
ಜುಲೈ 21, 2001: ಕೇರಳದ ಕಡಲುಂಡಿಯ ಕಡಲುಂಡಿ ನದಿ ರೈಲು ಸೇತುವೆಯ ಮೇಲೆ ಸಂಭವಿಸಿದ ಅಪಘಾತದಲ್ಲಿ ಚೆನ್ನೈಗೆ ಹೊರಟಿದ್ದ ಮಂಗಳೂರು ಮೇಲ್‌ನ ಎಂಟು ಬೋಗಿಗಳು ಹಳಿತಪ್ಪಿದ್ದವು. ಕೋಝಿಕ್ಕೋಡ್‌ನಿಂದ 10 ಕಿ.ಮೀ ದೂರದಲ್ಲಿರುವ ಕಡಲುಂಡಿ ನದಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 57 ಜನ ಸಾವನ್ನಪ್ಪಿದ್ದರು.
ಸೆಪ್ಟೆಂಬರ್ 10, 2002: ಕೋಲ್ಕತ್ತಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಬಿಹಾರದ ರಫಿಗಂಜ್‌ನ ರಫಿಗಂಜ್ ರೈಲು ಸೇತುವೆಯ ಮೇಲೆ ಅಪಘಾತಕ್ಕೀಡಾಗಿ 130 ಜನ ಸಾವೀಗೀಡಾಗಿದ್ದರು. ಬಿಹಾರ ರಾಜಧಾನಿ ಪಾಟ್ನಾದಿಂದ ಸುಮಾರು 130 ಮೈಲಿ ದೂರದಲ್ಲಿರುವ ರಫಿಗಂಜ್ ಬಳಿ ನಡೆದ ಈ ಅಪಘಾತ ಬಹುದೊಡ್ಡ ಅಪಘಾತವಾಗಿದೆ.
28 ಆಗಸ್ಟ್ 2003: ದಮನ್‌ನ ಪಶ್ಚಿಮ ಕರಾವಳಿ ಪ್ರದೇಶದಲ್ಲಿರುವ ನದಿಯಲ್ಲಿ ಸೇತುವೆ ಕುಸಿದು, ಶಾಲಾ ಬಸ್ ಮತ್ತು ಇತರ ಹಲವಾರು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಈ ಅಪಘಾತದಲ್ಲಿ 25 ಮಂದಿ ಸಾವನ್ನಪ್ಪಿದ್ದರು.
ಅಕ್ಟೋಬರ್ 29, 2005: ತೆಲಂಗಾಣದಲ್ಲಿ ವೆಲಿಗೊಂಡ ರೈಲ್ವೆ ಸೇತುವೆ ಕುಸಿದ ನಂತರ ಇಡೀ ರೈಲು ನೀರಿನಲ್ಲಿ ಮುಳುಗಿತ್ತು. ಈ ಅಪಘಾತದಲ್ಲಿ 114 ಜನ ಮೃತಪಟ್ಟರು. ಸೇತುವೆಯ ಒಂದು ಭಾಗ ಕೊಚ್ಚಿಹೋಗಿದ್ದರಿಂದ ಈ ಅವಘಡ ಸಂಭವಿಸಿತ್ತು. ಹಠಾತ್ ಪ್ರವಾಹದಿಂದಾಗಿ ಹೈದರಾಬಾದ್ ಬಳಿ ಅಪಘಾತ ಸಂಭವಿಸಿತ್ತು.
02 ಡಿಸೆಂಬರ್ 2006: ಬಿಹಾರ ರಾಜ್ಯದ ಭಾಗಲ್ಪುರ್ ರೈಲು ನಿಲ್ದಾಣದಲ್ಲಿ 150 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು 33 ಜನರು ಸಾವನ್ನಪ್ಪಿದರು. ಹೌರಾ ಜಮಾಲ್‌ಪುರ ಸೂಪರ್‌ಫಾಸ್ಟ್ ರೈಲು ಹಾದುಹೋಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿತ್ತು.
9 ಸೆಪ್ಟೆಂಬರ್ 2007: ತೆಲಂಗಾಣ ರಾಜ್ಯದ ಹೈದರಾಬಾದ್‌ನ ಪಂಜಗುಟ್ಟದಲ್ಲಿರುವ ಮೇಲ್ಸೇತುವೆ ಸೇತುವೆಯು ನಿರ್ಮಾಣದ ಸಮಯದಲ್ಲಿ ಕುಸಿದು 20 ಜನರು ಸಾವನ್ನಪ್ಪಿದ್ದರು. ಹೈದರಾಬಾದ್‌ನ ವಾಣಿಜ್ಯ ಪ್ರದೇಶವಾದ ಪಂಜಗುಟ್ಟದಲ್ಲಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದ ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು.
ಡಿಸೆಂಬರ್ 25, 2009: ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆಯ ಅವಶೇಷಗಳಡಿಯಲ್ಲಿ 37 ಕಾರ್ಮಿಕರು ಸಿಲುಕಿದ್ದರು.
22 ಅಕ್ಟೋಬರ್ 2011: ಡಾರ್ಜಿಲಿಂಗ್‌ನಲ್ಲಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಸೇತುವೆ ಕುಸಿದು 32 ಜನರು ಸಾವನ್ನಪ್ಪಿದ್ದರು.
ಆಗಸ್ಟ್ 2, 2016: ಮಹಾರಾಷ್ಟ್ರದ ಸಾವಿತ್ರಿ ನದಿ ಸೇತುವೆ ಅಪಘಾತದಲ್ಲಿ 28 ಜನ ಮೃತಪಟ್ಟಿದ್ದರು. ಮಹಾಡ್ ಬಳಿ ಸಾವಿತ್ರಿ ನದಿ ಮೇಲಿನ 106 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದಿತ್ತು.
ಮಾರ್ಚ್ 31, 2016: ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಮೇಲ್ಸೇತುವೆಯ ಸುಮಾರು 100 ಮೀಟರ್ ಕುಸಿದು 27 ಜನರು ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: ಕುಸಿದು ಬಿದ್ದ ಮೊರ್ಬಿ ಸೇತುವೆ.. ಸಿಸಿಟಿವಿಯಲ್ಲಿ ಸೇತುವೆ ಕುಸಿಯುತ್ತಿರುವ ದೃಶ್ಯ ಸೆರೆ!