ನವದೆಹಲಿ: ಮಹಾತ್ಮ ಗಾಂಧಿಯವರ ಸಲಹೆಯ ಮೇರೆಗೆ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಿಂದೂ ಮಹಾಸಭಾದ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
'Veer Savarkar: The Man Who Could Have Prevented Partition' (ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ) ಎಂಬ ಪುಸ್ತಕವನ್ನು ದೆಹಲಿಯಲ್ಲಿ ಮಂಗಳವಾರ, ಅಕ್ಟೋಬರ್ 12 ರಂದು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಆರ್ಎಸ್ಎಸ್ ಸರಸಂಘ ಚಾಲಕ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಇದ್ದರು.
ರಾಜನಾಥ್ ಸಿಂಗ್ ಸಾವರ್ಕರ್ ಅವರ ಟೀಕಾಕಾರರಿಗೆ ತಿರುಗೇಟು ನೀಡಿದರು. ಸಾವರ್ಕರ್ ಬಗ್ಗೆ ಸುಳ್ಳುಗಳ ಪ್ರಚಾರ ನಡೆಯಿತು. ಸಾವರ್ಕರ್ ತಮ್ಮ ಬಿಡುಗಡೆಗಾಗಿ ಬ್ರಿಟೀಷರಿಗೆ ಕ್ಷಮಾದಾನ ಅರ್ಜಿ ಬರೆದಿದ್ದರು ಎಂಬ ಆರೋಪವನ್ನು ಪದೇ ಪದೆ ಮಾಡಲಾಗುತ್ತದೆ. ಸತ್ಯ ಎಂದರೆ ಅವರು ತಮ್ಮ ಬಿಡುಗಡೆಗಾಗಿ ಈ ಅರ್ಜಿಗಳನ್ನು ಸಲ್ಲಿಸಿಲ್ಲ. ಆದರೆ, ಈ ರೀತಿ ಕ್ಷಮಾದಾನ ಅರ್ಜಿ ಬರೆಯುವುದಕ್ಕೆ ಸಾವರ್ಕರ್ಗೆ ಹೇಳಿದ್ದು ಮಹಾತ್ಮ ಗಾಂಧಿ ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧಿಯವರು ಸಾವರ್ಕರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ ಹೇಳಿದ್ದರು. ನಾವು ಸ್ವಾತಂತ್ರ್ಯವನ್ನು ಪಡೆಯಲು ಶಾಂತಿಯುತ ಚಳವಳಿಯನ್ನು ನಡೆಸುತ್ತಿದ್ದೇವೆ, ಸಾರ್ವಕರ್ಜಿಗೂ ಇದನ್ನು ಮಾಡಲು ಅವಕಾಶ ನೀಡಬೇಕು ಎಂದಿದ್ದರು ಎಂದು ಹೇಳಿದರು.
ಓವೈಸಿ ಅಸಮಾಧಾನ:
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಎಂಐಎಂ ನಾಯಕ ಓವೈಸಿ ಪ್ರತಿಕ್ರಿಯೆ ನೀಡಿದ್ದು "ಬಿಜೆಪಿ ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ. ಬಿಜೆಪಿಗರು ತಿರುಚಿದ ಇತಿಹಾಸವನ್ನು ಮಂಡಿಸುತ್ತಿದ್ದಾರೆ. ಇದು ಇದೇ ರೀತಿ ಮುಂದುವರೆದಲ್ಲಿ ಮಹಾತ್ಮ ಗಾಂಧಿ ಅವರ ಬದಲಾಗಿ, ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಎಂದು ಘೋಷಿಸಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ: ಗಾಂಧಿ ರಾಷ್ಟ್ರಪಿತ ಎಂದು ನಾನು ಭಾವಿಸುವುದಿಲ್ಲ: ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್