ಮುಂಬೈ : ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಬಣ ಮತ್ತು ಎನ್‌ಸಿಪಿ ಮುಖಂಡ ಮತ್ತು ಸದ್ಯದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣಗಳು ತೀವ್ರ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗಿದ್ದು, ಎರಡೂ ಬಣಗಳು ಮುಂಬೈನಲ್ಲಿ ಸಭೆ ನಡೆಸಿ ತಮ್ಮ ಬಲಾಬಲ ಪ್ರದರ್ಶನ ಮಾಡುತ್ತಿವೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಎಲ್ಲ ಎನ್‌ಸಿಪಿ ಸಂಸದರು, ಶಾಸಕರು, ಎಂಎಲ್‌ಸಿಗಳು, ಜಿಲ್ಲಾ ಮುಖಂಡರು ಮತ್ತು ರಾಜ್ಯ ಪ್ರತಿನಿಧಿಗಳ ಸಭೆಯನ್ನು ಎಂಇಟಿ ಬಾಂದ್ರಾದಲ್ಲಿ ಕರೆದಿದ್ದಾರೆ. ಹಾಗೆಯೇ ಶರದ್ ಪವಾರ್ ಬಣದ ಸಭೆ ವೈ.ಬಿ. ಚವಾಣ್ ಆಡಿಟೋರಿಯಂನಲ್ಲಿ ಸದ್ಯ ನಡೆಯುತ್ತಿದೆ.
ಅಜಿತ್ ಪವಾರ್ ಬಣದ ಸಭೆ ಎಂಇಟಿನಲ್ಲಿ ಆರಂಭವಾಗುತ್ತಿದ್ದಂತೆಯೇ ಬಣಕ್ಕೆ ತಮ್ಮ ನಿಷ್ಠೆಯನ್ನು ತೋರಿಸುವ ಸಲುವಾಗಿ ಪಕ್ಷದ ಕಾರ್ಯಕರ್ತರಿಂದ ಅಫಿಡವಿಟ್ಗಳಿಗೆ ಸಹಿ ಹಾಕಿಸಿಕೊಳ್ಳಲಾಯಿತು. ಇನ್ನು ಎನ್‌ಸಿಪಿಯ ಶರದ್ ಪವಾರ್ ಬಣದ ನಾಯಕರು ಪಕ್ಷದ ಸಭೆಗಾಗಿ ಮುಂಬೈನ ವೈ.ಬಿ. ಚವಾಣ್ ಸೆಂಟರ್‌ಗೆ ಆಗಮಿಸುತ್ತಿದ್ದಂತೆ ಅವರ ಬೆಂಬಲಿಗರು ಶರದ್ ಪವಾರ್ ಪರವಾಗಿ ಘೋಷಣೆಗಳನ್ನು ಕೂಗಿದರು.
ಎನ್‌ಸಿಪಿಯ ಬಹುತೇಕ ಶಾಸಕರು ತಮ್ಮ ಪರವಾಗಿಯೇ ಇರುವುದರಿಂದ ತಮಗೆ ಯಾವುದೇ ಚಿಂತೆಯಿಲ್ಲ ಎಂದು ಅಜಿತ್ ಪವಾರ್ ಬಣದ ನಾಯಕ ಪ್ರಫುಲ್ ಪಟೇಲ್ ಸಭೆಗೂ ಮುನ್ನ ಹೇಳಿದರು. ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಎಲ್ಲರೂ ನಮ್ಮೊಂದಿಗಿದ್ದಾರೆ, ಚಿಂತೆಯ ಮಾತೇ ಇಲ್ಲ ಎಂದರು.
ಸಭೆಗೂ ಮುನ್ನ ಅಜಿತ್ ಪವಾರ್ ಅವರು ಪಕ್ಷದ ಇತರ ನಾಯಕರೊಂದಿಗೆ ಮುಂಬೈ ಎಜುಕೇಶನ್ ಟ್ರಸ್ಟ್ ಬಾಂದ್ರಾದಲ್ಲಿ ಎನ್‌ಸಿಪಿಯ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಸಿಪಿ ನಾಯಕ ಛಗನ್ ಭುಜಬಲ್, ವೇದಿಕೆಯಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕುಳಿತಿರುವ ನಾಯಕರ ಸಂಖ್ಯೆ ನಮಗೆ ಕಾಣಿಸುತ್ತಿದೆ. ಬೆಂಬಲಿಗರು ಅಫಡವಿಟ್ಗಳಿಗೆ ಸಹಿ ಹಾಕುತ್ತಿದ್ದಾರೆ. ನಾಯಕರ ನಿಖರ ಸಂಖ್ಯೆಯನ್ನು ವೇದಿಕೆಯಲ್ಲಿ ಮಾತ್ರ ನೋಡಬಹುದು ಎಂದು ಹೇಳಿದರು.
ನಂತರ ಸಭೆಯಲ್ಲಿ ಮಾತನಾಡಿದ ಛಗನ್ ಭುಜಬಲ್, 40ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್‌ಸಿಗಳು ನಮ್ಮೊಂದಿಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಮುನ್ನ ನಾವು ಎಲ್ಲ ವಿಷಯಗಳನ್ನು ಪರಿಶೀಲನೆ ಮಾಡಿದ್ದೇವೆ, ಸುಮ್ಮನೆ ಹಾಗೇ ಪ್ರಮಾಣ ವಚನ ಸ್ವೀಕರಿಸಿಲ್ಲ ಎಂದು ತಿಳಿಸಿದರು.
ಇದರ ಜೊತೆಗೆ ಮುಂಬೈನಲ್ಲಿ ಮತ್ತೊಂದು ಮಹತ್ವದ ರಾಜಕೀಯ ಸಭೆ ನಡೆಯುತ್ತಿದೆ. ಮಹಾರಾಷ್ಟ್ರ ವಿಕಾಸ್ ಆಘಾಡಿಯ ಪಾಲುದಾರ ಪಕ್ಷ ಶಿವಸೇನಾ ಉದ್ಧವ್ ಠಾಕ್ರೆ ಪಕ್ಷದ ಸಭೆ ಮಾತೋಶ್ರಿಯಲ್ಲಿ ನಡೆಯುತ್ತಿದೆ.
ಅಜಿತ್ ಪವಾರ್ ಬಣದ ಸಭೆಯ ವೇದಿಕೆಯ ಹಿಂದೆ ಶರದ್ ಪವಾರ್ ಅವರ ದೊಡ್ಡ ಭಾವಚಿತ್ರ ಹಾಕಿರುವುದು ವಿಶೇಷವಾಗಿದೆ. ಅಲ್ಲದೆ ಅಜಿತ್ ದಾದಾ ಅವರೇ ಮಹಾರಾಷ್ಟ್ರದ ಏಕೈಕ ಹುಲಿ ಎಂಬ ಘೋಷಣೆಗಳು ಸಭೆಯಲ್ಲಿ ಕೇಳಿ ಬಂದವು. ಇನ್ನು ಶರದ್ ಪವಾರ್ ಸಭೆಯ ವೇದಿಕೆಯ ಹಿಂದೆ ಕೂಡ ಶರದ್ ಅವರ ಭಾವಚಿತ್ರ ಹಾಕಲಾಗಿದೆ. ಸದ್ಯದ ಬೆಳವಣಿಗೆಗಳ ಪ್ರಕಾರ ಶರದ್ ಪವಾರ್ ಬಣದ ಸಭೆಯಲ್ಲಿ 11 ಎನ್‌ಸಿಪಿ ಶಾಸಕರು ಹಾಗೂ ಅಜಿತ್ ಪವಾರ್ ಬಣದ ಸಭೆಯಲ್ಲಿ 29 ಶಾಸಕರು ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 53 ಎನ್‌ಸಿಪಿ ಶಾಸಕರಿದ್ದಾರೆ. ಹಾಗಾಗಿ ಅಜಿತ್ ಬಣದಲ್ಲಿ ಕಾಣಿಸಿಕೊಂಡಿರುವ 29 ಮತ್ತು ಶರದ್ ಸಭೆಯಲ್ಲಿ ಕಾಣಿಸಿಕೊಂಡಿರುವ 11 ಶಾಸಕರನ್ನು ಸೇರಿಸಿದರೆ 40 ಆಗುತ್ತದೆ. ಇನ್ನೂ 13 ಶಾಸಕರ ಬೆಂಬಲ ಯಾರಿಗೆ ಎನ್ನುವ ಪ್ರಶ್ನೆ ಈಗ ಮೂಡಿದೆ. ಸಭೆ ಮುಗಿಯುವ ಹೊತ್ತಿಗೆ ಅಥವಾ ದಿನದ ಅಂತ್ಯಕ್ಕೆ ಮಹಾರಾಷ್ಟ್ರ ರಾಜಕೀಯ ಇನ್ನೂ ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಕ್ಷಣದ ಬೆಳವಣಿಗೆ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಬಣದ ಸಭೆಗೆ ಈಗ ತಾನೇ ಬಂದಿದ್ದಾರೆ. ತಮ್ಮ ನಾಯಕನನ್ನು ನೋಡಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನು ಅಜಿತ್ ಪವಾರ್ ಸದ್ಯ ತಮ್ಮ ಬಣದ ಸಭೆಯಲ್ಲಿ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ : Maharashtra Politics: ಎನ್‌ಸಿಪಿ ಪಕ್ಷ, ಚಿಹ್ನೆಗಾಗಿ ಅಜಿತ್ ಬಣದ ಅರ್ಜಿ: ಶರದ್ ಬಣದಿಂದ ಕೇವಿಯಟ್