ಮುಂಬೈ: ಬಂಡಾಯ ಶಾಸಕರ ವಿರುದ್ಧ ಉಪಸಭಾಪತಿ ನರಹರಿ ಜಿರ್ವಾಲ್ ನೀಡಿರುವ ಅನರ್ಹತೆ ನೋಟಿಸ್ ಅನ್ನು ಶಿವಸೇನಾ ಶಾಸಕ ಮತ್ತು ಸಚಿವ ಏಕನಾಥ್ ಶಿಂಧೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. 38 ಶಾಸಕರು ತಮ್ಮ ಬೆಂಬಲ ಹಿಂಪಡೆದಿರುವುದರಿಂದ ಸರ್ಕಾರ ಅಲ್ಪಮತದಲ್ಲಿದೆ ಎಂದು ಶಿಂಧೆ ಅರ್ಜಿಯಲ್ಲಿ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠದ ಮುಂದೆ ಶಿಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ವಿಧಾನಸಭೆಯ ಉಪ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿರುವ ಬಂಡಾಯ ನಾಯಕ ಶಿಂದೆ ಒಂದು ಅರ್ಜಿ ಸಲ್ಲಿಕೆ ಮಾಡಿದರೆ, ಬಂಡಾಯ ಶಾಸಕರು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಜಯ್ ಚೌಧರಿ ನೇಮಕದ ವಿರುದ್ಧ ಅರ್ಜಿ: ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅವರ ವಿರುದ್ಧ ಯಾವುದೇ ಅನರ್ಹತೆ ಕ್ರಮ ಕೈಗೊಳ್ಳದಂತೆ ಉಪ ಸಭಾಧ್ಯಕ್ಷರಿಗೆ ನ್ಯಾಯಾಲಯ ಸೂಚಿಸುವಂತೆ ಅರ್ಜಿಯಲ್ಲಿ ಕೊರಲಾಗಿದೆ. ಕೇವಲ 16 ಶಾಸಕರಿಗೆ ಅನರ್ಹತೆ ನೋಟಿಸ್ ಜಾರಿಗೊಳಿಸಿರುವ ಉಪಾಧ್ಯಕ್ಷರ ನಡೆ ಕಾನೂನುಬಾಹಿರ ಎಂದು ಶಿಂದೆ ಗುಂಪು ಅರ್ಜಿಯಲ್ಲಿ ಪ್ರತಿಪಾದಿಸಿದೆ.
ಬಂಡಾಯ ಶಾಸಕರ ಕುಟುಂಬಗಳಿಗೆ ಭದ್ರತೆ ನೀಡಿ: ಬಂಡಾಯ ಶಾಸಕರ ಕುಟುಂಬಗಳಿಗೆ ಭದ್ರತೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವುದರಿಂದಾಗಿ ಅಸ್ಸೋಂ ರಾಜಧಾನಿ ಗುವಾಹಟಿಯಲ್ಲಿ ಶಿಂದೆ ಬಣದ ಶಾಸಕರು ಹೋಟೆಲ್‌ಗಳಲ್ಲಿ ಬೀಡುಬಿಟ್ಟಿದ್ದಾರೆ.
38 ಸದಸ್ಯರಿಂದ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್: ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ಸದಸ್ಯರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇಲ್ಲ. 38 ಶಿವಸೇನೆ ಸದಸ್ಯರು ತಮ್ಮ ಬೆಂಬಲವನ್ನು ಹಿಂಪಡೆದಿದ್ದರಿಂದ ಮಹಾರಾಷ್ಟ್ರದ ಪ್ರಸ್ತುತ ಸರ್ಕಾರವು ಸದನದಲ್ಲಿ ಬಹುಮತ ಕಳೆದುಕೊಂಡಿದೆ. ಹಾಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಈ ನಡುವೆ ಮಹಾ ವಿಕಾಸ ಅಘಾಡಿ ಸರ್ಕಾರ ಅಧಿಕಾರದಲ್ಲಿ ಉಳಿಯಲು ಉಪಾಧ್ಯಕ್ಷ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಶಿಂದೆ ಪರ ವಕೀಲರು ಅರ್ಜಿಯಲ್ಲಿ ವಾದಿಸಿದ್ದಾರೆ.
ಕರ್ನಾಟಕ ಬಿಕ್ಕಟ್ಟಿನಲ್ಲಿ ವಾದ ಮಾಡಿದ್ದ ಇಬ್ಬರು ವಕೀಲರಿಂದ ವಾದ: ಕರ್ನಾಟಕದಲ್ಲಿ ಸರ್ಕಾರ ಮತ್ತು ಅತೃಪ್ತ ಬಣದ ಬಿಕ್ಕಟ್ಟಿನ ಪ್ರಕರಣದಲ್ಲಿ ವಾದ ಮಂಡಿಸಿದ್ದ ವಕೀಲರಲ್ಲಿ ಇಬ್ಬರು ಇದೀಗ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ವಿಚಾರಣೆಯಲ್ಲಿ ವಾದ ಮಂಡಿಸಲಿದ್ದಾರೆ.
ಸುಪ್ರೀಂನಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರದ ಪರವಾಗಿ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ರೆ, ಏಕನಾಥ್ ಶಿಂಧೆ ನೇತೃತ್ವದ ಅತೃಪ್ತ ಶಾಸಕರ ಬಣದ ಪರವಾಗಿ ವಕೀಲ ಹರೀಶ್ ಸಾಳ್ವೆ ವಕಾಲತ್ತು ವಹಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಕಾಲತ್ತು ಹಾಕಿದ್ದಾರೆ. ಈ ಹಿಂದೆ ಕರ್ನಾಟಕದ 2019ರ ಸರ್ಕಾರ ರಚನೆ ವೇಳೆಯೂ ಅಭಿಷೇಕ್ ಮನುಸಿಂಘ್ವಿ ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ್ದು ಗಮನಾರ್ಹ.
ಓದಿ: ರಾಜ್ ಠಾಕ್ರೆ ಜತೆ ಏಕನಾಥ ಶಿಂದೆ ಎರಡೆರಡು ಬಾರಿ ಮಾತುಕತೆ: ತೀವ್ರ ಕುತೂಹಲ ಕೆರಳಿಸಿದ ಬಂಡಾಯ ನಾಯಕನ ನಡೆ