ಮುಂಬೈ(ಮಹಾರಾಷ್ಟ್ರ): ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರ ಸರ್ಕಾರದ ಸಚಿವ ಚಗನ್ ಭುಜಬಲ್, ಒಂದು ವೇಳೆ ಶಾರುಖ್ ಖಾನ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರೆ ಡ್ರಗ್ಸ್ ಅನ್ನೋದು ಸಕ್ಕರೆ ಪುಡಿಯಾಗಿ ಬದಲಾಗುತ್ತದೆ ಎಂದು ಟೀಕಿಸಿದ್ದಾರೆ.
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಆರೋಪಿಗಳಲ್ಲೊಬ್ಬರು. ಆರ್ಯನ್ ಖಾನ್ ಅವರನ್ನು ರಾಷ್ಟ್ರೀಯ ಮಾದಕ ಪದಾರ್ಥ ನಿಯಂತ್ರಣ ದಳ (ಎನ್‌ಸಿಬಿ) ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ವಶದಲ್ಲಿದ್ದಾರೆ. ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣ ಉಲ್ಲೇಖಿಸಿ ಟೀಕಿಸಿರುವ ಅವರು, ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಪತ್ತೆಯಾದ 3 ಸಾವಿರ ಕೆ.ಜಿ ಹೆರಾಯಿನ್ ಪ್ರಕರಣವನ್ನು ತನಿಖೆ ಮಾಡುವ ಬದಲು ಎನ್‌ಸಿಬಿ ಶಾರುಖ್ ಖಾನ್ ಪುತ್ರನ ಹಿಂದೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮುಂದುವರೆದು ಮಾತನಾಡುತ್ತಾ, ಒಂದುವೇಳೆ ಶಾರುಖ್ ಬಿಜೆಪಿ ಸೇರಿದರೆ ಅದೇ ಡ್ರಗ್ಸ್ ಸಕ್ಕರೆ ಪುಡಿಯಾಗಿ ಬದಲಾಗುತ್ತದೆ ಎಂದಿದ್ದಾರೆ. ಮಹಾರಾಷ್ಟ್ರದ ಬೀಡ್ ಎಂಬಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಎನ್‌ಡಿಪಿಎಸ್ ಕೋರ್ಟ್ ಆರ್ಯನ್ ಖಾನ್ (23) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಅವರೀಗ ಕೇಂದ್ರ ಮುಂಬೈನ ಆರ್ಥರ್ ರೋಡ್ ಜೈಲಲ್ಲಿದ್ದಾರೆ. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಸ್ನೇಹಿತರಾದ ಅರ್ಬಾಜ್ ಮರ್ಚೆಂಟ್(26) ಹಾಗು ಫ್ಯಾಶನ್ ಮಾಡೆಲ್ ಮುನ್‌ಮುನ್ ಧಮೇಚಾ (28) ಕೂಡಾ ಬಂಧಿತರಾಗಿದ್ದಾರೆ.