ಮುಂಬೈ : ಆಸ್ಪತ್ರೆಗಳಿಗೆ ಜೋಡಿಸಲಾಗಿರುವ ವೈದ್ಯಕೀಯ ಕಾಲೇಜುಗಳನ್ನು ಮ್ಯೂಕೋರ್ಮೈಕೋಸಿಸ್ ಚಿಕಿತ್ಸಾ ಕೇಂದ್ರಗಳಾಗಿ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಕೊರೊನಾದಿಂದ ಗುಣಮುಖರಾಗುತ್ತಿರುವವರಲ್ಲಿ ಕಂಡು ಬರುತ್ತಿರುವ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.
ಬ್ಲ್ಯಾಕ್ ಫಂಗಸ್ ಎಂದೂ ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ ಲಕ್ಷಣಗಳು ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗಿನ ಅಥವಾ ಸೈನಸ್ ದಟ್ಟಣೆ ಮತ್ತು ಭಾಗಶಃ ದೃಷ್ಟಿ ಕಳೆದುಕೊಳ್ಳುವ ಲಕ್ಷಣವನ್ನು ಹೊಂದಿದೆ.
"ರಾಜ್ಯದಲ್ಲಿ 2,000 ಕ್ಕೂ ಹೆಚ್ಚು ಮ್ಯೂಕೋರ್ಮೈಕೋಸಿಸ್‌ನ ರೋಗಿಗಳು ಇರಬಹುದು ಮತ್ತು ಹೆಚ್ಚು ಹೆಚ್ಚು ಕೊರೊನಾ ಪ್ರಕರಣಗಳು ಬರುತ್ತಿರುವುದರಿಂದ, ಅವರ ಸಂಖ್ಯೆ ಖಚಿತವಾಗಿ ಹೆಚ್ಚಾಗುತ್ತದೆ. ಈ ಹಿನ್ನೆಲೆ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ" ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದರು.
ಮುಕಾರ್ಮೈಕೋಸಿಸ್ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. "ಮ್ಯೂಕೋರ್ಮೈಕೋಸಿಸ್ ರೋಗಿಗಳಿಗೆ ಮಹಾತ್ಮ ಫುಲೆ ಜಾನ್ ಆರೋಗ್ಯ ಯೋಜನೆ (ರಾಜ್ಯದ ಪ್ರಮುಖ ಆರೋಗ್ಯ ಯೋಜನೆ) ಅಡಿಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ನೀಡಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಸಚಿವರು ಹೇಳಿದರು.
ದುಬಾರಿ ಚಿಕಿತ್ಸೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮ್ಯೂಕಾರ್ಮೈಕೋಸಿಸ್ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಬೆಲೆಯನ್ನು ನಿಗದಿ ಪಡಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.