ನವದೆಹಲಿ: ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಮಗಳು ಮೃತಪಟ್ಟಳು, ಲಸಿಕೆಯ ಅಡ್ಡಪರಿಣಾಮವೇ ಇದಕ್ಕೆ ಕಾರಣ. ಹೀಗಾಗಿ ತಮಗೆ ಕಂಪನಿಯಿಂದ 1 ಸಾವಿರ ಕೋಟಿ ರೂಪಾಯಿ ಪರಿಹಾರ ಕೊಡಿಸಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ಬಗ್ಗೆ ವರದಿ ನೀಡಲು ಸೂಚಿಸಿ ಕೇಂದ್ರ ಸರ್ಕಾರ, ಸೀರಮ್ ಇನ್‌ಸ್ಟಿಟ್ಯೂಟ್, ಬಿಲ್ ಗೇಟ್ಸ್, ಏಮ್ಸ್ ನಿರ್ದೇಶಕ, ಡಿಸಿಜಿಐ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
ಸಾವಿರ ಕೋಟಿ ಪರಿಹಾರಕ್ಕಾಗಿ ಕೋರ್ಟ್ಗೆ ಅರ್ಜಿ: ಮಹಾರಾಷ್ಟ್ರದ ದಿಲೀಪ್ ಲುನಾವತ್ ಎಂಬುವವರು ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ವಿರುದ್ಧ ಆರೋಪ ಮಾಡಿದ್ದಾರೆ. ತನ್ನ ಮಗಳಾದ ಸ್ನೇಹಲ್ ಲುನಾವತ್ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದರು. ನಾಸಿಕ್ನ ಅವರ ಕಾಲೇಜಿನಲ್ಲಿ ಕೋವಿಡ್ ಲಸಿಕೆಯಾದ ಕೋವಿಶೀಲ್ಡ್ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.
ಲಸಿಕೆ ಹಾಕಿಸಿಕೊಂಡ ಬಳಿಕ ಅವರಿಗೆ ತೀವ್ರ ತಲೆನೋವು, ವಾಂತಿ ಕಾಣಿಸಿಕೊಂಡಿತು. ಆಸ್ಪತ್ರೆಗೆ ದಾಖಲಿಸಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿರುವುದನ್ನು ವೈದ್ಯರು ಪತ್ತೆ ಮಾಡಿದರು. ಇದರಿಂದ ಸ್ನೇಹಲ್ ತೀವ್ರ ಅನಾರೋಗ್ಯದಿಂದ ಕಳೆದ ವರ್ಷ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ತಮ್ಮ ಮಗಳ ಸಾವಿಗೆ ಲಸಿಕೆಯೇ ಕಾರಣವಾಗಿದೆ. ಲಸಿಕೆಯ ಅಡ್ಡಪರಿಣಾಮದಿಂದ ಆಕೆ ಜೀವ ಕಳೆದುಕೊಂಡರು ಎಂದು ಆರೋಪಿಸಿದ್ದಾರೆ.
ವೈದ್ಯಳಾಗಬೇಕು ಎಂದು ಕನಸು ಕಂಡಿದ್ದ ಮಗಳ ಸಾವಿಗೆ ನ್ಯಾಯವಾಗಿ ಸೀರಂ ಕಂಪನಿಯಿಂದ 1 ಸಾವಿರ ಕೋಟಿ ರೂಪಾಯಿ ಪರಿಹಾರ ಕೊಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆ ನಡೆಸಿದ ಕೋರ್ಟ್, ಈ ಬಗ್ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ನವೆಂಬರ್ 17 ರಂದು ವಿಚಾರಣೆಯನ್ನು ಮುಂದೂಡಿದೆ.
ಓದಿ: ಭಾರತದಲ್ಲಿ 7,000 ಕ್ಕೂ ಹೆಚ್ಚು ಹೊಸ ಕೋವಿಡ್ ಸೋಂಕು ಪತ್ತೆ, 33 ಸಾವು