ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಮಾದಕ ಮಾತ್ರೆಗಳನ್ನು ಸೇವಿಸಿದ ನಂತರ ತಂದೆಯೊಬ್ಬ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಬಾವಿಗೆ ಎಸೆದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ ಸ್ಥಳೀಯ ಯುವಕನೊಬ್ಬ ಸಮಯ ಪ್ರಜ್ಞೆ ಮತ್ತು ಸಾಹಸದಿಂದ ಒಬ್ಬ ಬಾಲಕ ಬದುಕುಳಿದಿದ್ದಾರೆ. ಆದರೆ, ಮತ್ತೊಬ್ಬ ಬಾಲಕ ದುರದೃಷ್ಟವಶಾತ್ ಸಾವನ್ನಪ್ಪಿದ್ದಾನೆ.
ಇಲ್ಲಿನ ಚೌಧರಿ ಕಾಲೋನಿಯಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ರಾಜು ಪ್ರಕಾಶ್ ಭೋಸ್ಲೆ ಎಂಬ ಕ್ರೂರಿ ತಂದೆ ಈ ಕೃತ್ಯ ಎಸಗಿದ್ದಾನೆ. ತನ್ನ ಇಬ್ಬರು ಮಕ್ಕಳಾದ ಎಂಟು ಮತ್ತು ನಾಲ್ಕು ವರ್ಷದ ಬಾಲಕನನ್ನು ಬಾವಿಗೆ ಎಸೆದಿದ್ದಾನೆ. ಈ ವೇಳೆ ಸದ್ದು ಕೇಳಿ ಸಮೀಪದಲ್ಲೇ ವಾಸವಿದ್ದ ಅನಿರುದ್ಧ ದಹಿಹಂದೆ ಎಂಬ ಯುವಕ ಬಾವಿಯತ್ತ ಓಡಿ ಬಂದಿದ್ದಾನೆ. ಆಗ ಮಕ್ಕಳು ಬಾವಿಗೆ ಬಿದ್ದರುವುದನ್ನು ಅರಿತು ಅನಿರುದ್ಧ ಒಂದು ಕ್ಷಣವೂ ಮರು ಯೋಚಿಸದೆ ಬಾವಿಗೆ ಹಾರಿದ್ದಾನೆ. ಪರಿಣಾಮ ಹಿರಿಯ ಮಗನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾನೆ. ಆದರೆ, ನಾಲ್ಕು ವರ್ಷದ ಬಾಲಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಈ ಘಟನೆ ಕುರಿತು ಮಾಹಿತಿ ಪಡೆದ ಎಂಐಡಿಸಿ ಸಿಡ್ಕೋ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿ ರಾಜು ಪ್ರಕಾಶ್ ಭೋಸ್ಲೆಯನ್ನು ಬಂಧಿಸಿದ್ದಾರೆ. ಈತ ಕುಡುಕ ಎಂಬ ಕಾರಣಕ್ಕೆ ಮನೆಯಲ್ಲಿ ಗಲಾಟೆಗಳು ನಡೆಯುತ್ತಿದ್ದವು. ಕೆಲ ತಿಂಗಳ ಹಿಂದೆ ಪತ್ನಿ ಜಗಳ ಮಾಡಿಕೊಂಡು ನಾಂದೇಡ್‌ನಲ್ಲಿರುವ ಮನೆ ಬಿಟ್ಟು ಹೋಗಿದ್ದಳು. ಆರೋಪಿ ರಾಜು ತನ್ನ ಮಕ್ಕಳೊಂದಿಗೆ ಕಳೆದ ವಾರದ ಹಿಂದೆಯಷ್ಟೇ ಸಂಭಾಜಿನಗರಕ್ಕೆ ಬಂದಿದ್ದ ಎಂಬ ಪ್ರಾಥಮಿಕ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಮಗಳ ಕೊಂದು ಬಾಕ್ಸ್ನಲ್ಲಿ ಶವ ಮುಚ್ಚಿಟ್ಟ ಪಾಪಿ: ಮತ್ತೊಂದೆಡೆ, ಬಿಹಾರ ರಾಜಧಾನಿ ಪಾಟ್ನಾದಲ್ಲಿ ಘೋರ ಘಟನೆ ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಎರಡೂವರೆ ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿ, ಶವವನ್ನು ಅಡುಗೆಮನೆಯಲ್ಲಿ ಡಾಲ್ಡಾ ಬಾಕ್ಸ್ನಲ್ಲಿ ಮುಚ್ಚಿಟ್ಟಿದ್ದ ಬಯಲಾಗಿದೆ. ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಭರತ್ ಎಂಬಾತನೇ ಕೃತ್ಯ ಎಸಗಿದ್ದಾನೆ.
ಇಲ್ಲಿನ ಕಾಜಿಪುರ ಪ್ರದೇಶದಲ್ಲಿ ಭರತ್ ಮೊಟ್ಟೆ ಮಾರಾಟ ಮಾಡುತ್ತಿದ್ದ. ಆತನಿಗೆ ಈಗಾಗಲೇ ಒಬ್ಬ ಮಗನಿದ್ದಾನೆ. ಎರಡೂವರೆ ತಿಂಗಳ ಹಿಂದೆ ಮಗಳು ಜನಿಸಿದ್ದಳು. ಆಕೆಯ ಬಾಲ್ಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಳು. ಹೃದಯದಲ್ಲಿ ರಂಧ್ರ ಇರುವುದು ಸಹ ಪತ್ತೆಯಾಗಿತ್ತು. ಚಿಕಿತ್ಸೆಗೆಂದು ಮನೆಯ ಒಡವೆಗಳನ್ನೂ ಮಾರಾಟ ಮಾಡಲಾಗಿತ್ತು. ಆದರೂ ಆಕೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಮತ್ತೊಂದೆಡೆ, ಮೊಟ್ಟೆಯ ವ್ಯಾಪಾರದಲ್ಲಿ ಸಾಕಷ್ಟು ಸಂಪಾದಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಏಪ್ರಿಲ್ 26ರಂದು ಮಗಳನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಅಡುಗೆ ಮನೆಯಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಕೊಂದು ನಾಟಕ ಶುರು ಮಾಡಿದ್ದ: ಇಷ್ಟೇ ಅಲ್ಲ, ಈ ಪಾಪಿ ತಂದೆ ಮಗಳನ್ನು ಕೊಂದ ಬಳಿಕ ಹೊಸ ನಾಟಕ ಶುರು ಮಾಡಿದ್ದ. ಆಕೆ ಕಾಣೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ನಟಿಸಲು ಆರಂಭಿಸಿದ್ದ. ಹೆಂಡತಿ ಮಗುವಿನ ಬಗ್ಗೆ ಕೇಳಲು ಪ್ರಾರಂಭಿಸಿದಾಗ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ವೇಳೆ, ತಂದೆ ಭರತ್ ಮೇಲೆ ಅನುಮಾನ ಬಂದಿದ್ದರಿಂದ ಪೊಲೀಸರು ಸೂಕ್ಷ್ಮವಾಗಿ ತನಿಖೆ ಕೈಗೊಂಡಿದ್ದರು. ಆಗ ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿಮಲೇಂದು ವಿವರಿಸಿದ್ದಾರೆ.
ಇದನ್ನೂ ಓದಿ: ಸಿಗರೇಟ್ ವಿಚಾರ: 8ನೇ ತರಗತಿ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದ ಸಹಪಾಠಿಗಳು!