ನಾಗ್ಪುರ, ಮಹಾರಾಷ್ಟ್ರ: ಜಿಲ್ಲೆಯಲ್ಲಿ ಮನಕಲುಕುವ ಘಟನೆಯನ್ನು ನಡೆದಿದೆ. 24 ಗಂಟೆಗಳ ಕಾಲ ನಾಪತ್ತೆಯಾಗಿದ್ದ ಮೂವರು ಮಕ್ಕಳ ಪತ್ತೆಗೆ ಕುಟುಂಬಸ್ಥರು ಹಾಗೂ ಪೊಲೀಸರು ನಡೆಸಿದ ಪ್ರಯತ್ನ ವಿಫಲವಾಗಿದೆ. ಕೊನೆಗೆ ಮನೆಯ ಸಮೀಪದ ಕಾರಿನಲ್ಲಿ ಮಕ್ಕಳು ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ. ಈ ಘಟನೆ ಪಚ್ಪಾವಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫಾರೂಕ್ ನಗರದಲ್ಲಿ ಕಂಡು ಬಂದಿದ್ದು, ಇದರಿಂದಾಗಿ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮೃತ ಮಕ್ಕಳನ್ನು ತೌಫಿಕ್ ಫಿರೋಜ್ ಖಾನ್ (4 ವರ್ಷ), ಅಲಿಯಾ ಫಿರೋಜ್ ಖಾನ್ (6 ವರ್ಷ) ಮತ್ತು ಆಫ್ರಿನ್ ಇರ್ಷಾದ್ ಖಾನ್ (6 ವರ್ಷ) ಎಂದು ಗುರುತಿಸಲಾಗಿದೆ. ಈ ಮೂವರು ಮಕ್ಕಳು ಶನಿವಾರದಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ 24 ಗಂಟೆಗಳ ಕಾಲ ಪೊಲೀಸರು ಈ ಮಕ್ಕಳ ಪತ್ತೆಗಾಗಿ ಪ್ರಯತ್ನ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಭಾನುವಾರ ಸಂಜೆ ಮೂವರು ಮಕ್ಕಳ ಶವ ಕಾರಿನಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ.
ಪೊಲೀಸ್ ವರದಿ ಪ್ರಕಾರ.. ನಾಗ್ಪುರದ ಪಚ್ಪೋಲಿ ಪೊಲೀಸ್ ಠಾಣೆಯಲ್ಲಿ ವಾಸಿಸುತ್ತಿರುವ ತೌಫಿಕ್ ಫಿರೋಜ್ ಖಾನ್ (4), ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಶನಿವಾರ ಸಂಜೆ ಮೂರು ಗಂಟೆಯಿಂದ ನಾಪತ್ತೆಯಾಗಿದ್ದರು. ಟೇಕಾ ನಾಕಾ ಪ್ರದೇಶದ ಫಾರೂಕ್ ನಗರ ಮೈದಾನದಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ಮಕ್ಕಳು ಆಟವಾಡಲು ಹೋಗಿದ್ದರು. ಅದರ ನಂತರ ಅವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮಕ್ಕಳು ಹಿಂತಿರುಗದ ಕಾರಣ ಮನೆಯವರು ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಶೋಧ ಕೈಗೊಂಡಿದ್ದರು.
ಪೊಲೀಸರು ಮಕ್ಕಳ ಪತ್ತೆಗಾಗಿ ಇಡೀ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಪೊಲೀಸರು ಸಾವಿರಾರು ಸಿಸಿಟಿವಿಗಳನ್ನು ಪರಿಶೀಲಿಸಿದರು. ಆದರೂ ಸಹ ಮಕ್ಕಳ ಸುಳಿವಿನ ಬಗ್ಗೆ ಎಲ್ಲಿಯೂ ಪತ್ತೆಯಾಗಲಿಲ್ಲ. ಶನಿವಾರ ರಾತ್ರಿಯಿಂದ ನೂರಾರು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಮೂವರು ಮಕ್ಕಳ ಹುಡುಕಾಟಕ್ಕಾಗಿ ಕಾರ್ಯ ಕೈಗೊಂಡಿದ್ದರು.
ಫಾರೂಕ್ ನಗರ ಪ್ರದೇಶದಲ್ಲಿ ಹಲವು ಕಾರ್ಖಾನೆಗಳಿವೆ. ಪೊಲೀಸ್ ತಂಡ ಆ ಸ್ಥಳದಲ್ಲಿ ಮಕ್ಕಳ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಆದರೆ, ಭಾನುವಾರ ಸಂಜೆ ಮಕ್ಕಳ ಮನೆ ಬಳಿ ಸ್ಕ್ರ್ಯಾಪ್ ಕಾರಿನಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಪೊಲೀಸರು ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನತೆ: ಮೂವರು ಮಕ್ಕಳ ಶವ ಪತ್ತೆಯಾದ ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಆ ಕ್ಷೇತ್ರದ ಜನರ ಆಕ್ರೋಶದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಕ್ಕಳ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಕೈಗೊಂಡಿದ್ದರು.
ಶಾಖ ಮತ್ತು ಉಸಿರುಗಟ್ಟಿವಿಕೆಯಿಂದ ಸಾವು: ಮಕ್ಕಳು ಆಟವಾಡುತ್ತಿರುವಾಗ ಕಾರಿನ ಡೋರ್ ಲಾಕ್ ಆಗಿದೆ. ಮೂವರೂ ಶಾಖ ಮತ್ತು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಶನಿವಾರ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಅಪಹರಿಸಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಭಾನುವಾರ ಮೂವರು ಮಕ್ಕಳ ಸಾವಿನಿಂದ ಸಂಚಲನ ಮೂಡಿಸಿತು. ಹೀಗಾಗಿ ಈ ಪ್ರಕರಣ ಕುರಿತು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿತ್ತು. ಈಗ ಮರಣೋತ್ತರ ಪರೀಕ್ಷೆಯಿಂದ ಮಕ್ಕಳ ಸಾವಿನ ಸಂಗತಿ ಬಯಲಾಗಿದೆ.
ಓದಿ: ಕೌಟುಂಬಿಕ ಕಲಹ: ಕೆರೆಯಲ್ಲಿ ಬಿದ್ದು ತಂದೆ ಹಾಗೂ ಇಬ್ಬರು ಮಕ್ಕಳ ಸಾವು