ಬುಲ್ಧಾನಾ (ಮಹಾರಾಷ್ಟ್ರ): ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಹೆಚ್ಚಿನವರು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದಾರೆ. ಮೃತದೇಹಗಳ ಡಿಎನ್‌ಎ ಪರೀಕ್ಷೆಯ ಬದಲಿಗೆ ಸಾಮೂಹಿಕ ಅಂತ್ಯಕ್ರಿಯೆಗಾಗಿ ಅವರ ಕುಟುಂಬಗಳಿಗೆ ಮನವರಿಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಎನ್‌ಎ ಪರೀಕ್ಷೆಯು ಸುದೀರ್ಘ ಪ್ರಕ್ರಿಯೆ. ಮೃತರ ಗುರುತು ಖಚಿತಪಡಿಸಿಕೊಳ್ಳಲು ಹೆಚ್ಚು ದಿನಗಳು ಬೇಕಾಗುತ್ತವೆ. ಅಲ್ಲದೇ ಈಗಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ 25 ಮೃತರ ಸಂಬಂಧಿಕರು ಬುಲ್ಧಾನಾ ತಲುಪಿದ್ದಾರೆ. ಜಿಲ್ಲಾಡಳಿತ, ಶನಿವಾರ ಸಂಜೆಯಿಂದ ಸಂತ್ರಸ್ತರ ಸಂಬಂಧಿಕರೊಂದಿಗೆ ಮಾತುಕತೆ ನಡೆಸುತ್ತಿದೆ. ಡಿಎನ್‌ಎ ಪರೀಕ್ಷೆಗೆ ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆಗೆ ಮನವೊಲಿಸುವ ಪ್ರಯತ್ನ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮೃತರ ಕುಟುಂಬ ಸದಸ್ಯರೊಂದಿಗೆ ಚರ್ಚೆಗಳು ಅಂತಿಮ ಹಂತದಲ್ಲಿದೆ. ಸಮಸ್ಯೆ ಶೀಘ್ರವೇ ಪರಿಹಾರವಾಗಲಿದೆ ಎಂದು ಬುಲ್ಧಾನ ಕಲೆಕ್ಟರ್ ಹೆಚ್.ಪಿ. ತುಮ್ಮೋದ್ ಪ್ರತಿಕ್ರಿಯಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಪಘಾತದ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಶನಿವಾರ ಮುಂಜಾನೆ ಮಹಾರಾಷ್ಟ್ರದ ಪೂರ್ವ ಭಾಗದ ಬುಲ್ಧಾನಾ ಜಿಲ್ಲೆಯ ನಾಗ್ಪುರ-ಮುಂಬೈ 'ಸಮೃದ್ಧಿ ಎಕ್ಸ್‌ಪ್ರೆಸ್‌ವೇ' ಡಿವೈಡರ್‌ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ಪಲ್ಟಿಯಾಗಿತ್ತು. ಇದಾದ ನಂತರ ತೈಲ ಟ್ಯಾಂಕ್ ಸಿಡಿದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ ಡೋರ್ ಲಾಕ್ ಆದ ಕಾರಣ 25 ಪ್ರಯಾಣಿಕರು ಸಜೀವ ದಹನಗೊಂಡಿದ್ದರು. ಮೃತರಲ್ಲಿ 11 ಪುರುಷ ಮತ್ತು 14 ಮಹಿಳಾ ಪ್ರಯಾಣಿಕರು ಸೇರಿದ್ದರು. ಸಾವನ್ನಪ್ಪಿದವರಲ್ಲಿ ಹತ್ತು ಮಂದಿ ವಾರ್ಧಾ, ಏಳು ಮಂದಿ ಪುಣೆ, ನಾಲ್ವರು ನಾಗ್ಪುರದಿಂದ ಮತ್ತು ತಲಾ ಇಬ್ಬರು ಯವತ್ಮಾಲ್ ಮತ್ತು ವಾಶಿಮ್‌ನಿಂದ ಪ್ರಯಾಣಿಸುತ್ತಿದ್ದರು. ಭೀಕರ ಅಪಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿದಂತೆ ಎಂಟು ಮಂದಿ ಬದುಕುಳಿದಿದ್ದಾರೆ.
ಬದುಕುಳಿದವರು ನೀಡಿದ ಹೇಳಿಕೆ ಪ್ರಕಾರ, ವಿದರ್ಭ ಟ್ರಾವೆಲ್ಸ್ನ ಸ್ಲೀಪರ್ ಕೋಚ್ ಬಸ್ ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದಾಗ ನಾಗ್ಪುರದಿಂದ 130 ಕಿ.ಮೀ ದೂರದಲ್ಲಿರುವ ಸಿಂಧಖೇಡ್ರಾಜ ಬಳಿಯ ಪಿಂಪಲ್ಖುಟಾ ಗ್ರಾಮದಲ್ಲಿ ಶನಿವಾರ ಮುಂಜಾನೆ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬಸ್ ಬಲಭಾಗದಲ್ಲಿರುವ ಸ್ಟೀಲ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿತು. ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಸ್ ರಸ್ತೆಗೆ ಅಪ್ಪಳಿಸಿತು. ಆನ್‌ಮೋಡ್‌ನಲ್ಲಿ ಇದ್ದುದರಿಂದ ಇಂಜಿನ್ ಆಯಿಲ್ ತಾಪಮಾನ ಹೆಚ್ಚಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಟೈರ್ ಸ್ಫೋಟದಿಂದ ಬಸ್ ಅಪಘಾತ, ಮೃತಪಟ್ಟವರಿಗೆ ಪ್ರಧಾನಿ ಸಂತಾಪ, ₹ 2ಲಕ್ಷ ಪರಿಹಾರ.. ಫಡ್ನವಿಸ್ ಹೇಳಿದ್ದು ಹೀಗೆ