ಜಿರಾಕ್‌ಪುರ(ಪಂಜಾಬ್): ಇಳಿವಯಸ್ಸಿನ ಅಜ್ಜನಿಗೆ ಲಕ್ಕಿ ಡ್ರಾದಲ್ಲಿ ಬಂಪರ್ ಲಾಟರಿ ಬಂದಿದೆ. ಇಲ್ಲಿನ ತ್ರಿವೇದಿ ಕ್ಯಾಂಪ್‌ನ ನಿವಾಸಿಯಾದ ಮಹಂತ್ ದ್ವಾರಕಾ ದಾಸ್ ಎಂಬುವರರಿಗೆ 5 ಕೋಟಿ ರೂಪಾಯಿ ಲಾಟರಿ ಬಂದಿದೆ. ಇದು ಕುಟುಂಬಸ್ಥರಿಗೆ ಸಂತಸ ಹೆಚ್ಚಿಸಿದ್ದಲ್ಲದೇ, ಹಿರಿಯ ವ್ಯಕ್ತಿಗೆ ಅಭಿನಂದನಾ ಸಮಾರಂಭವನ್ನೂ ಹಮ್ಮಿಕೊಂಡಿದ್ದಾರೆ.
ದ್ವಾರಕಾ ದಾಸ್ ಅವರು ಕೆಲವು ದಿನಗಳ ಹಿಂದೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ಮೊಮ್ಮಗನ ಮೂಲಕ ಲಾಟರಿ ಟಿಕೆಟ್ ಖರೀದಿಸಿದ್ದರು. ಇದೀಗ ಅವರು ಖರೀದಿಸಿದ ಟಿಕೆಟ್ಗೆ ಲಾಟರಿ ಹೊಡೆದಿದೆ. ಅದೂ ಬರೋಬ್ಬರಿ 5 ಕೋಟಿ ರೂಪಾಯಿ. ಹಿರಿಯರಾದ ಮಹಂತ್ ದ್ವಾರಕಾ ದಾಸ್ ಅವರು ಮೊದಲು ಇದನ್ನು ನಂಬಲಿಲ್ಲ. ಬಳಿಕ ಲಾಟರಿ ಹೊಡೆದ ಸುದ್ದಿ ತಿಳಿದು, ಮನೆಯವರೂ ಸೇರಿದಂತೆ ದ್ವಾರಕಾ ದಾಸ್ ಅವರು ಖುಷಿಯಲ್ಲಿ ತೇಲಾಡಿದ್ದಾರೆ.
ಇನ್ನು ಈ ವಿಷಯ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡು ಇಡೀ ಊರ ಜನರು ದಾಸ್ ಅವರಿಗೆ ಅಭಿನಂದನೆ ಸಲ್ಲಿಸಲು ಆಗಮಿಸುತ್ತಿದ್ದಾರೆ. ಲಾಟರಿ ಟಿಕೆಟ್ ಮಾರಾಟ ಮಾಡುವ ಲೋಕೇಶ್ ಕುಮಾರ್ ಎಂಬಾತ ಹೇಳಿದಂತೆ, ಜಿರಾಕ್‌ಪುರದ ಪಂಚಕುಲ ರಸ್ತೆಯಲ್ಲಿ ಲಕ್ಕಿ ಲಾಟರಿ ಅಂಗಡಿ ನಡೆಸುತ್ತಿರುವೆ. 10 ದಿನಗಳ ಹಿಂದೆ ಮಹಂತ್ ದಾಸ್ ಅವರು ಮೊಮ್ಮಗ ನಿಖಿಲ್ ಶರ್ಮಾ ಲೋಹ್ರಿ ಅವರು ಬಂಪರ್ ಟಿಕೆಟ್ ಖರೀದಿಸಲು ಬಂದಿದ್ದರು. ನಾನೇ ಟಿಕೆಟ್ ನೀಡಿದೆ ಎಂದು ಅಂಗಡಿಯವ ಹೇಳಿಕೊಂಡಿದ್ದಾನೆ.
’’ಈ ಹಿಂದೆ ಹಲವು ಬಾರಿ ಅವರು ನನ್ನಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದರು. ಮಹಂರ್ ಅವರ ಪುತ್ರ ಕಾರು ಚಾಲಕರಾಗಿದ್ದರೆ. ಮಹಂತ್ ಅವರ ಟಿಕೆಟ್ಗೆ 5 ಕೋಟಿಯ ಬಂಪರ್ ಲಾಟರಿ ಬಂದಿದೆ. ಗೆದ್ದ ನಂತರ ಕುಟುಂಬದಲ್ಲಿ ಸಂತಸದ ವಾತಾವರಣವಿದೆ. ಅವರ ಮನೆಯಲ್ಲಿ ಅಭಿನಂದನಾ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ. ಮನೆಯಲ್ಲಿ ಹಬ್ಬದ ವಾತಾವರಣವಿದೆ’’ಎಂದು ಲೋಕೇಶ್ ಕುಮಾರ್ ತಿಳಿಸಿದರು.
ತೆಲಂಗಾಣದ ವ್ಯಕ್ತಿಗೆ ಯುಎಇಯಲ್ಲಿ ಲಾಟರಿ: ಕೆಲವೊಮ್ಮೆ ಅದೃಷ್ಟ ಹೇಗೆ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಈತನೇ ಸಾಕ್ಷಿ. ದುಬೈನ ಕಂಪನಿಯಲ್ಲಿ ಚಾಲಕನಾಗಿದ್ದ ತೆಲಂಗಾಣದ ವ್ಯಕ್ತಿಗೆ ಎಮಿರೇಟ್ಸ್ ಲಕ್ಕಿ ಡ್ರಾದಲ್ಲಿ 15 ಮಿಲಿಯನ್ ದಿರ್ಹಂ ಅಂದರೆ 30 ಕೋಟಿ ರೂಪಾಯಿ ಬಹುಮಾನ ಧಕ್ಕಿತ್ತು. ಇದು ಆತನನ್ನು ದಿಢೀರ್ ಆಗಿ ಕೋಟ್ಯಧಿಪತಿಯನ್ನಾಗಿ ಮಾಡಿದೆ.
ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ತೆಲಂಗಾಂಣದ ಜಗ್ತಿಯಾಲ್ ಜಿಲ್ಲೆಯ ತುಂಗೂರಿನವರಾದ ಅಜಯ್ ಲಾಟರಿ ಬಹುಮಾನ ಪಡೆದವರು. 2 ಲಾಟರಿ ಟಿಕೆಟ್ ಖರೀದಿ ಮಾಡಿದ್ದ ಅಜಯ್ಗೆ ಒಂದದಲ್ಲಿ 30 ಕೋಟಿ ರೂಪಾಯಿ ಹಣ ಬಂದಿತ್ತು. ಇದನ್ನು ತಿಳಿದ ಆತನಿಗೆ ಇನ್ನಿಲ್ಲದ ಸಂತೋಷವನ್ನುಂಟು ಮಾಡಿತ್ತು. ವಿಪರ್ಯಾಸ ಅಂದರೆ ಸಂಬಳವಾಗಿ ಆತ ಮಾಸಿಕವಾಗಿ 3,200 ದಿರ್ಹಂ ಪಡೆಯುತ್ತಿದ್ದನಂತೆ.
ಸಾಲದ ಸುಳಿಯಿಂದ ಪಾರು ಮಾಡಿದ ಲಾಟರಿ: ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಲು ಮುಂದಾಗಿದ್ದ ಕಾಸರಗೋಡಿನ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಕೋಟ್ಯಂತರ ರೂಪಾಯಿ ಹಣ ಲಾಟರಿಯಲ್ಲಿ ಬಂದಿದೆ. ಕೇರಳದ ಕಾಸರಗೋಡಿನ ಮೊಹಮ್ಮದ್ ಬಾವ(50) ಎಂಬಾತನಿಗೆ ಈ ಅದೃಷ್ಟ ಲಕ್ಷ್ಮಿ ಒಲಿದಿದ್ದಳು. ಪೇಂಟರ್ ಆಗಿದ್ದ ಇತನೀಗ ಇನ್ನೊಬ್ಬರಿಗೆ ಸಾಲ ಕೊಡುವಷ್ಟು ಶ್ರೀಮಂತನಾಗಿದ್ದಾನೆ.
ಕೇರಳದಲ್ಲಿ ಪೇಂಟರ್ ಆಗಿ ಕೆಲಸ ಮಾಡ್ತಿದ್ದ ಮೊಹಮ್ಮದ್ 8 ತಿಂಗಳ ಹಿಂದೆ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದರು. ಆದರೆ, ವಿವಿಧ ಬ್ಯಾಂಕ್ಗಳಲ್ಲಿ ಮತ್ತು ವ್ಯಕ್ತಿಗಳಲ್ಲಿ ಹಣ ಪಡೆದುಕೊಂಡಿದ್ದರು. ಹೀಗಾಗಿ, ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಕಾರಣ ಮನೆ ಮಾರಾಟಕ್ಕೆ ಮುಂದಾಗಿದ್ದರು. ಹೀಗಾಗಿ, ಮಂಜೇಶ್ವರದಲ್ಲಿ ನಿರ್ಮಿಸಿದ್ದ ಮನೆ ಮಾರಾಟಕ್ಕಿಟ್ಟು, ಅದಕ್ಕೋಸ್ಕರ ಟೋಕನ್ ಹಣ ಸ್ವೀಕರಿಸಲು ಮುಂದಾಗಿದ್ದರು. ಇದಕ್ಕೆ ಕೇವಲ ಎರಡು ಗಂಟೆ ಬಾಕಿ ಇರುವಾಗಲೇ 1 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು.
ಓದಿ: 'ನಾನು 25 ಕೋಟಿ ಲಾಟರಿ ಗೆಲ್ಲಲೇಬಾರದಿತ್ತು': ಕೇರಳದ ಆಟೋ ಚಾಲಕನ ಬೇಸರ