ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೇ 20ರಂದೇ ಏಕನಾಥ ಶಿಂದೆ ಅವರಿಗೆ ಸಿಎಂ ಉದ್ದವ್ ಠಾಕ್ರೆ ಅವರು ಮುಖ್ಯಮಂತ್ರಿ ಪದವಿಯ ಆಫರ್ ನೀಡಿದ್ದರು. ಆದರೆ, ಇದಾದ ಸರಿಯಾಗಿ ಒಂದೇ ತಿಂಗಳಿಗೆ ಶಿಂದೆ ಬಂಡಾಯ ಎದ್ದಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ಇದನ್ನು ಖುದ್ದು ಠಾಕ್ರೆ ಮಗ, ಸಚಿವ ಆದಿತ್ಯ ಠಾಕ್ರೆ ಬಹಿರಂಗಪಡಿಸಿದ್ದಾರೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಆಘಾಡಿ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ಇದರಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿರುವುದಲ್ಲದೇ ಸರ್ಕಾರವನ್ನೇ ಪತನದಂಚಿಗೆ ತಂದು ನಿಲ್ಲಿಸಿದೆ. ಅಷ್ಟೇ ಅಲ್ಲ, ಶಿವಸೇನೆಯಲ್ಲೇ ಎರಡು ಗಣಗಳಾಗಿ ಇಬ್ಭಾಗವಾಗುವ ಹಂತಕ್ಕೆ ತಲುಪಿದೆ.
ಶಿಂದೆಗೆ ದಿಗ್ಭ್ರಮೆ.. ಇದರ ನಡುವೆ ಇದೀಗ ಆದಿತ್ಯ ಠಾಕ್ರೆ ಅಚ್ಚರಿಯ ಅಂಶ ಬಯಲಿಗೆ ಹಾಕಿದ್ದಾರೆ. ಉದ್ಧವ್ ಠಾಕ್ರೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಯಾದ ಏಕನಾಥ ಶಿಂದೆ ಅವರಿಗೆ ಸಿಎಂ ಸ್ಥಾನದ ಆಫರ್ ನೀಡಿದ್ದರು. ಇದನ್ನು ಕೇಳಿಯೇ ಶಿಂಧೆ ದಿಗ್ಭ್ರಮೆಗೊಂಡಿದ್ದರು ಎಂದು ಜ್ಯೂನಿಯರ್ ಠಾಕ್ರೆ ಹೇಳಿದ್ದಾರೆ.
ಒಂದು ತಿಂಗಳಿಗೆ ಬಂಡಾಯ ಶುರು.. ಅಲ್ಲದೇ, ನಂತರ ನುಣುಚಿಕೊಳ್ಳಲು ಶಿಂಧೆ ಆರಂಭಿಸಿದರು. ಸರಿಯಾದ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಇದೇ ವೇಳೆ ಕೆಲವು ಗೊಂದಲಮಯ ಘಟನೆಗಳ ಬಗ್ಗೆ ಕೇಳಿದ್ದೆ. ಇದಾದ ಸರಿಯಾಗಿ ಒಂದು ತಿಂಗಳಿಗೆ ಜೂನ್ 20ರಂದು ಶಿಂದೆ ಮತ್ತು ಅವರ ಗುಂಪಿನ ಬಂಡಾಯ ಪ್ರಾರಂಭವಾಯಿತು ಎಂದೂ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.
ಕೆಸರು ತಾನಾಗಿಯೇ ಹೊರಗುತ್ತಿದೆ.. ಎಲ್ಲ 'ಕೆಸರು'ಗಳು ತಾನಾಗಿಯೇ ಪಕ್ಷದಿಂದ ಹೊರ ಹೋಗಿರುವುದು 'ಒಳ್ಳೆಯ ವಿಮೋಚನೆ. ಈಗ ಚಪ್ಪಾಳೆಗಳ ಗುಡುಗಿನ ನಡುವೆ ಅದು ಸ್ವಚ್ಛವಾಗಿ ಬಿಡುತ್ತದೆ ಎಂದೂ ಜ್ಯೂನಿಯರ್ ಠಾಕ್ರೆ ವಿಶ್ಲೇಷಿಸಿದ್ದಾರೆ. ಜೊತೆಗೆ ಪ್ರಸ್ತುತ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಶಾಸಕರು 'ದ್ರೋಹಿ'ಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ.
ತಂದೆ ಹೇಳಿಕೆಗೆ ಅಸಮ್ಮತಿ.. ಇದೇ ವೇಳೆ ತಂದೆ ಉದ್ಧವ್ ಠಾಕ್ರೆ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನು ಆದಿತ್ಯ ನೀಡಿದ್ದಾರೆ. ಶಿವಸೇನೆವನ್ನು ತೊರೆಯಲು ಬಯಸುವವರಿಗೆ ಅಥವಾ ಪಕ್ಷಕ್ಕೆ ಮರಳಲು ಬಯಸುವವರಿಗೆ ಪಕ್ಷದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಸಿಎಂ ಠಾಕ್ರೆ ಹೇಳಿದ್ದರು. ಆದರೆ, ಬಂಡಾಯ ಶಾಸಕರನ್ನು ಶಿವಸೇನೆಗೆ ಮರಳಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆದಿತ್ಯ ಠಾಕ್ರೆ ಗುಡುಗಿದ್ದಾರೆ.
ಮಹತ್ವ ಪಡೆದ ಆದಿತ್ಯ ಹೇಳಿಕೆ.. ಗುವಾಹಟಿಯಲ್ಲಿರುವ ಬಂಡಾಯ ಶಾಸಕರ ಗುಂಪು ಶಿಂದೆ ಅವರನ್ನು ಸಿಎಂ ಮಾಡಬೇಕೆಂದು ಬಯಸಿದೆ. ಇತ್ತ, ಬಿಜೆಪಿ ನಾಯಕ, ಕೇಂದ್ರ ಸಚಿವ ರೈಸಾಹೇಬ ದಾನ್ವೆ ಪಾಟೀಲ್ ಮುಂದಿನ 2-3 ದಿನಗಳಲ್ಲಿ ಹೊಸ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. ಇದರ ನಡುವೆ ಶಿಂದೆ ಅವರಿಗೆ ಸಿಎಂ ಆಫರ್ ನೀಡಲಾಗಿತ್ತು ಎಂಬ ಆದಿತ್ಯ ಹೇಳಿಕೆ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: Maharashtra political crisis.. ಶಿವಸೇನೆಗೆ ಮತ್ತೊಂದು ಶಾಕ್, ಶಿಂದೆ ಗುಂಪು ಸೇರಿದ ಶಿಕ್ಷಣ ಸಚಿವ