ಚಂದ್ರಪುರ(ಮಹಾರಾಷ್ಟ್ರ):ಚಂದ್ರಪುರ ತಾಲೂಕಿನಾದ್ಯಂತ ಹುಡುಗಿಯರಿದ್ದಾರೆ. ಆದರೆ, ನನಗೆ ಯಾವುದೇ ಗೆಳತಿಯರಿಲ್ಲ ಎಂಬ ಚಿಂತೆ ನನಗಿದೆ. ಇದು ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಮದ್ಯಪಾನ ಮಾಡೋರು ಗೆಳತಿಯನ್ನು ಹೊಂದಿರುತ್ತಾರೆ. ಆದರೆ, ನನ್ನಂತಹ ಸಿಂಪಲ್ ಹುಡುಗರಿಗೆ ಗೆಳತಿಯರು ಸಿಗುತ್ತಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಚಂದ್ರಪುರ ತಾಲೂಕಿನ ಶಾಸಕ ಸುಭಾಷ್ ಧೋತೆಗೆ ಪತ್ರ ಬರೆದಿದ್ದಾನೆ.
ನಾನು ದಿನಾಲೂ ಗಡಚಂದೂರಿನಿಂದ ರಾಜೂರಕ್ಕೆ ಪ್ರಯಾಣಿಸುತ್ತೇನೆ. ಆದರೂ ಯಾವ ಹುಡುಗಿಯೂ ನನಗೆ ಆಕರ್ಷಿತಳಾಗುವುದಿಲ್ಲ. ಇದು ನನ್ನ ಹೃದಯ ನೋಯುವಂತೆ ಮಾಡಿದೆ ಎಂದು ವ್ಯಕ್ತಿ ಅಳಲು ತೋಡಿಕೊಂಡಿದ್ದಾನೆ. ಇನ್ನೂ ವಿಶೇಷ ಎಂದರೆ ಇದು ವೈರಲ್ ಆದ ಪತ್ರವಾಗಿದ್ದು, ಸುಭಾಷ್ ಅವರ ಬೆಂಬಲಿಗನೊಬ್ಬ ಸುಭಾಷ್ ಅವರಿಗೆ ಕಳುಹಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಭಾಷ್ ಧೋತೆ ಯುವಕನಿಗೆ ನೇರವಾಗಿ ಭೇಟಿಯಾಗುವಂತೆ ವಿಡಿಯೋವೊಂದರಲ್ಲಿ ತಿಳಿಸಿದ್ದಾರೆ. ಜೊತೆಗೆ ನಾನೇನಾದರೂ, ಆ ಯುವಕನನ್ನು ಭೇಟಿಯಾದರೆ, ಅವನ ಸಮಸ್ಯೆಯನ್ನು ತಿಳಿದುಕೊಳ್ಳುತ್ತೇನೆ. ಜೊತೆಗೆ ಸೂಕ್ತ ಪರಿಹಾರ ಹುಡುಕುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದನ್ನು ಕೆಲವರು ಪ್ರಚಾರಕ್ಕಾಗಿ ಪತ್ರ ಬರೆಯಲಾಗಿದೆ ಎಂದು ಹೇಳಲಾಗುತ್ತದೆ. ಆದರೂ ಸುಭಾಷ್ ಧೋತೆ ವ್ಯಕ್ತಿಯನ್ನು ಹುಡುಕಲು ತನ್ನ ಬೆಂಬಲಿಗರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ಬಂತು ಬಂಪರ್ ಆದಾಯ