ಪಾಲ್ಘರ್ (ಮಹಾರಾಷ್ಟ್ರ): ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ನಡೆಸಿದ ಆ್ಯಸಿಡ್ ದಾಳಿಗೆ 27 ವರ್ಷದ ಯುವಕನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಜರುಗಿದೆ.
ಜಿಮ್ ಮಾಲೀಕ ರಿತೇಶ್ ಕದಮ್ ಎಂಬುವರು ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಮಾಹಿತಿ ಪ್ರಕಾರ, ದಾಳಿ ಮಾಡಿದ ಇಬ್ಬರು ಆರೋಪಿಗಳ ಪೈಕಿ ಒರ್ವ ವ್ಯಕ್ತಿಯ ಹೆಂಡತಿ ಜೊತೆ ಕದಮ್ ಅಕ್ರಮ ಸಂಬಂಧ ಹೊಂದಿದ್ದ ಎಂದು ಶಂಕಿಸಿ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 326ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಇನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.