ಪ್ರಯಾಗರಾಜ್(ಉತ್ತರಪ್ರದೇಶ): ಮಾಫಿಯಾ ಡಾನ್ ಅತೀಕ್ ಅಹ್ಮದ್ ಅವರ ಪಾಳು ಬಿದ್ದ ಕಚೇರಿ ಬಳಿ ಇಬ್ಬರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 7 ದೇಶಿಯ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಕ್ಕಿಬಿದ್ದ ಇಬ್ಬರೂ ತಂದೆ ಮತ್ತು ಮಗನಾಗಿದ್ದು, ಇವರು ಸ್ಕ್ರ್ಯಾಪ್ ಡೀಲರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಅತೀಕ್ ಅವರ ಪೂರ್ವಜರ ಮನೆಯ ಬಳಿ ವಾಸಿಸುತ್ತಿದ್ದ ಈ ಇಬ್ಬರೂ ಅತೀಕ್ ಅಹ್ಮದ್ ಮತ್ತು ಅವರ ಕುಟುಂಬದ ಬೆಂಬಲಿಗರು ಮತ್ತು ಸಹಾಯಕರು ಎಂದು ಹೇಳಲಾಗುತ್ತದೆ.
ಪ್ರಯಾಗರಾಜ್‌ನ ಖುಲ್ದಾಬಾದ್ ಪೊಲೀಸ್ ಠಾಣೆಯ ಪೊಲೀಸರು ಅನೀಸ್ ಅಖ್ತರ್ ಕಬಾಡಿ ಮತ್ತು ಅವರ ಮಗ ಮೊಹಮ್ಮದ್ ರೆಹಮಾನ್ ಎಂಬ ತಂದೆ ಮಗನನ್ನು ಬಂಧಿಸಿದ್ದಾರೆ. ಅಕ್ಟೋಬರ್ 9 ರಂದು ಅತೀಕ್ ಅವರ ಇಬ್ಬರು ಪುತ್ರರು ಅಬ್ಸರ್ವೇಶನ್ ಹೋಮ್‌ನಿಂದ ಹೊರ ಬಂದಾಗ ಸಂಭ್ರಮಾಚರಣೆ ಕಂಡುಬಂದಿತ್ತು. ಆಗ ಸಂಭ್ರಮಾಚರಣೆಯಲ್ಲಿ ಈ ತಂದೆ-ಮಗ ಇಬ್ಬರು ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಅತೀಕ್ಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆಗಿನಿಂದಲೂ ಪೊಲೀಸರು ಇವರಿಬ್ಬರನ್ನು ಗುರುತಿಸಿ, ಇವರ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದರು.
ಅತೀಕ್ ಅವರ ಚಾಕಿಯಾ ಕಚೇರಿ ಬಳಿ ಇಬ್ಬರು ಶಂಕಿತರು ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ಲಭಿಸಿತ್ತು. ನಾವು ಕೂಡಲೇ ಅಲ್ಲಿಗೆ ದಾಳಿ ನಡೆಸಿ ಕಸರಿ ಮಸಾರಿ ನಿವಾಸಿ ರೆಹಮಾನ್ ಮತ್ತು ಆತನ ತಂದೆ ಅನೀಶ್ ಕಬಾಡಿಯನ್ನು ಬಂಧಿಸಿದ್ದೆವು. ಬಂಧಿತರಿಂದ ಏಳು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡು, ಅವುಗಳನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ತಂದೆ ಮತ್ತು ಮಗ ಅತೀಕ್ ಅಹ್ಮದ್‌ಗೆ ಆತ್ಮೀಯರು ಎಂದು ತಿಳಿಸಿದ್ದಾರೆ. ಉಮೇಶ್ ಪಾಲ್ ಹತ್ಯೆಯ ನಂತರ ನನ್ನ ಸುರಕ್ಷತೆಗಾಗಿ ಬಾಂಬ್ ಇಟ್ಟುಕೊಂಡಿದ್ದೇವೆ. ಈ ಬಾಂಬ್‌ಗಳನ್ನು ಅತೀಕ್‌ನ ಪಾಳುಬಿದ್ದ ಕಚೇರಿಯಲ್ಲಿ ಬಚ್ಚಿಡಲು ಬಂದಿದ್ದೆವು ಎಂಬ ವಿಚಾರವನ್ನು ವಿಚಾರಣೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಸ್ಫೋಟಕ ಕಾಯ್ದೆಯಡಿ ತಂದೆ ಮತ್ತು ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬಾಂಬ್ ನಿಷ್ಕ್ರಿಯ: ಬಾಂಬ್ ನಿಷ್ಕ್ರಿಯಗೊಳಿಸುತ್ತಿದ್ದಂತೆ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದರು. ಅತೀಕ್ ಜೊತೆ ಯಾವ ರೀತಿಯ ಅಪರಾಧ ಅಥವಾ ಅಕ್ರಮ ವ್ಯವಹಾರದಲ್ಲಿ ಈ ಇಬ್ಬರು ಶಾಮೀಲಾಗಿದ್ದರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ನೈನಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಗ್ಯಾಂಗ್ಸ್ಟಾರ್ ಅತೀಕ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಮುಜಾಫರ್ ಬಿಡುಗಡೆ.. ಮೆರವಣಿಗೆ..!