ಚೆನ್ನೈ (ತಮಿಳುನಾಡು) : ಸಮಾಜದ ತಿರಸ್ಕಾರದಿಂದಾಗಿ ಅದೆಷ್ಟೋ ತೃತೀಯಲಿಂಗಿಗಳು ತಮ್ಮನ್ನು ಸಮಾಜದಲ್ಲಿ ಪ್ರದರ್ಶಿಸಿಕೊಳ್ಳುವುದಿಲ್ಲ. ತಮ್ಮತನ ಮುಚ್ಚಿಟ್ಟು ಅವರು ಬದುಕು ನಡೆಸುತ್ತಿರುತ್ತಾರೆ. ಆದರೆ, ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲಿಕೆ ನಡೆಸುತ್ತಿದ್ದ ಲಾಯರ್ವೊಬ್ಬರು ತಾವು ತೃತೀಯಲಿಂಗಿ ಎಂದು ಘೋಷಿಸಿಕೊಂಡಿದ್ದಾರೆ. ಪುರುಷ ವಕೀಲರಾಗಿ ನೋಂದಾಯಿಸಿಕೊಂಡಿದ್ದ ಅವರು ಟ್ರಾನ್ಸ್‌ಜೆಂಡರ್ ಎಂದು ಹೇಳಿಕೊಂಡಿದ್ದಾರೆ.
ಇಷ್ಟು ದಿನ ತಮ್ಮ ಗುರುತನ್ನು ಮರೆಮಾಚುವ ಅಗತ್ಯ ಏನಿತ್ತು? ಈಗ ಅದನ್ನು ಬಹಿರಂಗ ಮಾಡುವ ಅವಶ್ಯಕತೆ ಏನು? ಎಂಬ ಬಗ್ಗೆ ಪ್ರಶ್ನೆಗಳು ಕೇಳಿದಾಗ ಅವರು ತಾವ್ಯಾಕೆ ಈಗ ಅದನ್ನು ಬಹಿರಂಗ ಮಾಡಿದೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪುರುಷ ಲಾಯರ್ ಆಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರೂ, ನನ್ನನ್ನು ತೃತೀಯಲಿಂಗಿ ಎಂದು ಘೋಷಿಸಿಕೊಳ್ಳಲು ಸ್ವಲ್ಪ ಹಿಂಜರಿಕೆ ಇತ್ತು. ಕಾರಣ ಎಲ್ಲಿ ಸಮಾಜ ನನ್ನನ್ನು ನಿರ್ಲಕ್ಷ್ಯದಿಂದ ಕಾಣುತ್ತದೆ ಎಂಬ ಭೀತಿ ಇತ್ತು. ಹೀಗಾಗಿ ತನ್ನೊಳಗಿನ ಎಲ್ಲ ಭಾವನೆಗಳನ್ನು ಅದುಮಿಟ್ಟಿದ್ದೆ ಎಂದು ಅವರು ಹೇಳಿದ್ದಾರೆ.
ಸಮಾಜಕ್ಕೆ ಹೆದರಿ ನಿಜ ಮುಚ್ಚಿಟ್ಟಿದ್ದೆ: ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಸಲಿಂಗಕಾಮಿಗಳ ಸಹಬಾಳ್ವೆ ಅಪರಾಧವಲ್ಲ ಎಂದು ಹೇಳಿದೆ. ಇದರ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್ ಕೂಡ ಎಲ್‌ಜಿಬಿಟಿಕ್ಯು ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶವು ತೃತೀಯಲಿಂಗಿಗಳ ಬಗ್ಗೆ ಸಮಾಜಕ್ಕಿರುವ ತಪ್ಪು ತಿಳಿವಳಿಕೆ ಮತ್ತು ದೃಷ್ಟಿಕೋನ ಬದಲಾಗಲು ಅವಕಾಶ ನೀಡಿದಂತಾಗಿದೆ ಎಂದರು.
ತಾನು ತೃತೀಯಲಿಂಗಿ ಎಂದು ಗೊತ್ತಾಗಿ ಕುಟುಂಬ ಮತ್ತು ಸಮಾಜ ಬಹಿಷ್ಕಾರ ಹಾಕಿದಲ್ಲಿ, ಅದನ್ನು ಹೇಗೆ ಎದುರಿಸುವುದು ಎಂಬ ಭಯದಿಂದ ತಮ್ಮನ್ನು ಟ್ರಾನ್ಸ್‌ಜೆಂಡರ್ ಎಂದು ಘೋಷಿಸಿಕೊಳ್ಳಲಿಲ್ಲ. ಆದರೆ, ಇನ್ನು ಮುಂದೆ ನನ್ನ ನಿಜತನವನ್ನು ಮರೆಮಾಚುವ ಅಗತ್ಯವಿಲ್ಲ ಎಂಬ ಧೈರ್ಯದಲ್ಲಿ ಬಹಿರಂಗ ಮಾಡಿದೆ ಎಂದು ಅವರು ತಿಳಿಸಿದರು.
ತೃತೀಯಲಿಂಗಿಗಳಿಗೆ ಪ್ರತ್ಯೇಕ ಮೀಸಲಾತಿ ಬೇಕು: ಸಮಾಜ ಎಷ್ಟೇ ಆಧುನೀಕರಣಗೊಂಡಿದ್ದರೂ, ತೃತೀಯಲಿಂಗಿಗಳ ಬಗ್ಗೆ ಇನ್ನೂ ನಿರಾಕರಣೆ ಹೊಂದಿದೆ. ಕುಟುಂಬ ಮತ್ತು ಸಮಾಜವು ತಮ್ಮನ್ನು ಪ್ರತ್ಯೇಕವಾಗಿಯೇ ಕಾಣುತ್ತದೆ. ಈ ಪರಿಸ್ಥಿತಿಯು ದೊಡ್ಡ ನಗರಗಳಲ್ಲಿ ತುಸು ಕಡಿಮೆ ಇದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಸಲಿಂಗಕಾಮಕ್ಕೂ ಕಾನೂನು ಮಾನ್ಯತೆ ನೀಡಬೇಕು ಎಂಬ ವಾದದ ಕುರಿತು ಈಚೆಗೆ ಸುಪ್ರೀಂಕೋರ್ಟ್ ಹೊಸ ವ್ಯಾಖ್ಯಾನ ನೀಡಿದೆ. ಮಾನ್ಯತೆ ಸಿಗದಿದ್ದರೂ, ಸಲಿಂಗಕಾಮ ತಪ್ಪಲ್ಲ ಎಂದಿದೆ. ಇದು ನಮ್ಮಂತಹ ಜನರಿಗೆ ಬಲ ನೀಡಿದೆ ಎಂದರು.
ಸಲಿಂಗಕಾಮಿಗಳು, ತೃತೀಯಲಿಂಗಿಗಳು ವಿವಾಹವಿಲ್ಲದೇ ಒಟ್ಟಿಗೆ ವಾಸಿಸಿದಲ್ಲಿ ಕೌಟುಂಬಿಕ ಒಪ್ಪಂದದ ಕಾನೂನು ಅನ್ವಯಿಸಬೇಕು. ತೃತೀಯಲಿಂಗಿಗಳಿಗೆ ಎಲ್ಲದರಲ್ಲೂ ಪ್ರತ್ಯೇಕ ಮೀಸಲಾತಿ ನೀಡಬೇಕು. ಆಗ ಮಾತ್ರ ನಮ್ಮ ಸಮುದಾಯದ ಜನರೂ ಬೆಳಕಿಗೆ ಸಾಧ್ಯ ಎಂದರು.
ಡಿಎಂಕೆ ಸಂಸದ ತಿರುಚ್ಚಿ ಶಿವಾ ಅವರು ಸಂಸತ್ತಿನಲ್ಲಿ ತೃತೀಯಲಿಂಗಿಗಳಿಗೆ ಶೇಕಡಾ 2ರಷ್ಟು ಮೀಸಲಾತಿ ನೀಡಬೇಕು ಎಂದು ಪ್ರಸ್ತಾಪಿಸಿದ್ದರು. ಆದರೆ, ಅದು ಕಾನೂನಾಗಿ ಜಾರಿಯಾಗಿಲ್ಲ. ಸಂಸತ್ತಿನಲ್ಲಿ ತೃತೀಯಲಿಂಗಿಗಳ ಪ್ರತಿನಿಧಿಸುವ ಒಬ್ಬ ಸದಸ್ಯನೂ ಇಲ್ಲ. ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ಘೋಷಣೆ ಮಾಡುವ ಭರವಸೆಗಳು ನಿವಾಗಿಯೂ ಜಾರಿಯಾಗಲಿದೆ ಎಂದು ಕೋರಿದರು.
ಇದನ್ನೂ ಓದಿ: ಇವಳು ಎಲ್ಲರ ಮುದ್ದಿನ ಕಣ್ಮಣಿ.. ಸರ್ಕಾರಿ ಕಾಲೇಜಿನಲ್ಲಿ ಓದಿ ವಕೀಲಿಯಾದ ಮೊದಲ ತೃತೀಯಲಿಂಗಿ