ಚೆನ್ನೈ(ತಮಿಳುನಾಡು): ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಕಾಮೆಂಟ್‌ಗಳು ತೃತೀಯ ಲಿಂಗಿಗಳ ಭಾವನೆಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಇರಬೇಕು. ಇಂತಹ ವಿಷಯಗಳಲ್ಲಿ ತೀರಾ ಸೂಕ್ಷ್ಮವಾಗಿ ವ್ಯವಹರಿಸುವಂತೆ ಹಾಗೂ ಸುದ್ದಿ ಬಿತ್ತರಿಸುವಂತೆ ಮಾರ್ಗದರ್ಶನ ನೀಡುವಂತೆ ಗೂಗಲ್ ಮತ್ತು ಯೂಟ್ಯೂಬ್ ಕಂಪನಿಗಳಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ಎಐಎಡಿಎಂಕೆ ವಕ್ತಾರ ಅಪ್ಸರಾ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ತಮ್ಮ ಖ್ಯಾತಿ ಮತ್ತು ಘನತೆಗೆ ಮಸಿ ಬಳಿಯಲು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾದ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ಹಾಗೂ ಪೋಸ್ಟ್ ಗಳನ್ನು ಹಾಕಿದ್ದರ ಬಗ್ಗೆ ಪ್ರಸಿದ್ಧ ಯೂಟ್ಯೂಬರ್ ಜೋ ಮೈಕೆಲ್ ಪ್ರವೀಣ್ ವಿರುದ್ಧ, ತೃತೀಯಲಿಂಗಿಯೂ ಆಗಿರುವ ಎಐಎಡಿಎಂಕೆ ವಕ್ತಾರ ಅಪ್ಸರಾ ರೆಡ್ಡಿ, ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಸತೀಶ್ ಕುಮಾರ್ ಅವರು, ಜೋ ಮೈಕಲ್ ಪ್ರವೀಣ್ ಎಂಬುವರು ರೆಕಾರ್ಡ್ ಮಾಡಿದ್ದಾರೆ ಎನ್ನಲಾದ 10ಕ್ಕೂ ಹೆಚ್ಚು ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಗೂಗಲ್ ಹಾಗೂ ಯೂಟ್ಯೂಬ್ ಗೆ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಅವಹೇಳನಕಾರಿ ವಿಡಿಯೋ ಹಾಕಿದ್ದರೆ ಅವುಗಳನ್ನು ಕೂಡ ಕೂಡಲೇ ಡಿಲೀಟ್ ಮಾಡಬೇಕು ಎಂದು ತನ್ನ ಆದೇಶದಲ್ಲಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ವೈಯಕ್ತಿಕ ದಾಳಿಯಲ್ಲಿ ತೊಡಗಿರುವ ಯೂಟ್ಯೂಬರ್ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಅಪ್ಸರಾ ರೆಡ್ಡಿಗೆ 50 ಲಕ್ಷ ರೂ.ಗಳನ್ನು ನೀಡುವಂತೆ ಸೂಚಿಸಿದರು. ಅಷ್ಟೇ ಅಲ್ಲ, ಸಮಾಜದಲ್ಲಿ ತೃತೀಯಲಿಂಗಿ ಸಮುದಾಯ ಎದುರಿಸುತ್ತಿರುವ ತೊಂದರೆಗಳು ಮತ್ತು ಕಷ್ಟಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ಇಂತಹ ಘಟನೆಗಳು ಮತ್ತೆ ಮರುಕಳುಸದಂತೆ ಸೂಚಿಸಿದರು. ಅಲ್ಲದೇ ತೃತೀಯ ಲಿಂಗಿಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗೌರವಯುತವಾದ ಪೋಸ್ಟ್ ಮಾಡುವಂತೆ, ತನ್ನ ಬಳಕೆದಾರರಿಗೆ ನಿರ್ದೇಶನ ನೀಡುವಂತೆ ಹಾಗೂ ಮಾರ್ಗದರ್ಶನ ಮಾಡುವಂತೆ ಗೂಗಲ್ ಮತ್ತು ಯೂಟ್ಯೂಬ್‌ಗೆ ನಿರ್ದೇಶನ ನೀಡಿದೆ.
ಇದನ್ನು ಓದಿ: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ವಯಸ್ಸು ಖಚಿತಪಡಿಸಿಕೊಳ್ಳಿ: ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶನ
"ಮಾನನಷ್ಟ ಪ್ರಕರಣ" ಎಂಬ ಪದಗುಚ್ಛವನ್ನು ನಾವು ಆಗಾಗ್ಗೆ ಕೇಳುತ್ತೇವೆ. ಯಾವುದೇ ಮಾನಹಾನಿಕರ ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಐಪಿಸಿಯ ಸೆಕ್ಷನ್ 499 ಮತ್ತು 500ರ ಪ್ರಕಾರ ಮಾನನಷ್ಟ ಪ್ರಕರಣವನ್ನು ಹೂಡಬಹುದಾಗಿದೆ. ಮಾನಹಾನಿ ಎಂದರೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡಲು, ಯಾರೊಬ್ಬರ ವಿರುದ್ಧ ಏನಾದರೂ ಮಾತನಾಡುವುದು ಅಥವಾ ಹೇಳುವುದೇ ಆಗಿದೆ. ಯಾರೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಅವರ ಬಗ್ಗೆ ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುವುದನ್ನು ಮಾನನಷ್ಟ ಎಂದು ಕರೆಯಲಾಗುತ್ತದೆ.