ಸಿಧಿ(ಮಧ್ಯಪ್ರದೇಶ): ಆಂಬ್ಯುಲೆನ್ಸ್ ಸಿಗದ ಕಾರಣ ಬುಡಕಟ್ಟು ಬಾಲಕಿಯೊಬ್ಬಳ ಮೃತದೇಹವನ್ನು ಆಕೆಯ ಕುಟುಂಬಸ್ಥರು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಮನೆಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 7 ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸೆಮಾರಿಯಾ ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಪಾಂಡೆ ಪ್ರತಿಕ್ರಿಯಿಸಿ, ಮೃತ ಬಾಲಕಿಯನ್ನು 18 ವರ್ಷದ ಪೋಲ್ ಕೋಲ್ ಎಂದು ಗುರುತಿಸಲಾಗಿದೆ. ಬಾಲಕಿ ಹನುಮಾನ್ ಕೋಲ್ ಅವರ ಪುತ್ರಿಯಾಗಿದ್ದಾರೆ. ಇವರು ಸಿಧಿ ಜಿಲ್ಲೆಯ ಠಾಕೂರ್ ದೇವಾ ಗ್ರಾಮದ ನಿವಾಸಿಯಾಗಿದ್ದಾರೆ. ಬಾಲಕಿ ಗ್ರಾಮದ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ಕುಟುಂಬಸ್ಥರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಮಾರಿಯಾದ ಆಸ್ಪತ್ರೆಗೆ ಕೊಂಡೊಯ್ದಿದ್ದರು ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಕುಟುಂಬಸ್ಥರು ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಸಿಗದೇ ಪರದಾಡಿದ್ದಾರೆ. ಯಾವುದೇ ವಾಹನ ಕಾಣಿಸದ ಕಾರಣ, ಕುಟುಂಬ ಸದಸ್ಯರೇ ಬಿದಿರಿನ ಕಡ್ಡಿ ಮತ್ತು ಬಟ್ಟೆಯಿಂದ ಮೇಕ್-ಶಿಫ್ಟ್ ಸ್ಟ್ರೆಚರ್ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮೇಕ್-ಶಿಫ್ಟ್ ಸ್ಟ್ರೆಚರ್‌ನಲ್ಲಿ ಹಾಕಿ ಹೆಗಲ ಮೇಲೆ ಹೊತ್ತುಕೊಂಡು ಕಾಲ್ನಡಿಗೆ ಮೂಲಕ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ, ಬುಡಕಟ್ಟು ಕುಟುಂಬವು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಶವವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ದಿಶಾ ಆ್ಯಪ್ ಡೌನ್‌ಲೋಡ್ ವಿಚಾರವಾಗಿ ಯೋಧನ ಮೇಲೆ ಆಂಧ್ರ ಪೊಲೀಸರ ದಾಳಿ
ಈ ಹಿಂದೆ ನಡೆದಿತ್ತು ಇಂತಹದ್ದೆ ಘಟನೆ: ಕೆಲವು ತಿಂಗಳ ಹಿಂದೆ, ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಮನಕಲುಕುವಂತಹ ಘಟನೆಯೊಂದು ಬೆಳಕಿಗೆ ಬಂದಿತ್ತು. ಒಂದೂವರೆ ವರ್ಷದ ಮಗುವಿನ ಶವವನ್ನು ಪಾಲಿಥಿನ್‌ನಲ್ಲಿ ಸುತ್ತಿ ಅಸಹಾಯಕ ತಂದೆಯೊಬ್ಬರು ಮರಣೋತ್ತರ ಪರೀಕ್ಷೆ ಮಾಡಲು ಬೈಕ್‌ನಲ್ಲಿ ವೈದ್ಯಕೀಯ ಆಸ್ಪತ್ರೆಗೆ ತೆರಳಿರುವ ಘಟನೆ ಕೊರ್ಬಾ ಜಿಲ್ಲೆಯಲ್ಲಿ ಕಂಡು ಬಂದಿತ್ತು.
ಮಗು ಸಾವನ್ನಪ್ಪಿದ್ದು ಹೇಗೆ: ಈ ಘಟನೆ ಕೊರ್ಬಾ ಡೆವಲಪ್‌ಮೆಂಟ್ ಬ್ಲಾಕ್‌ನ ಅಡ್ಸೇನಾ ಗ್ರಾಮದಲ್ಲಿ ನಡೆದಿತ್ತು. ಇಲ್ಲಿ ನೆಲೆಸಿರುವ ದಾರಸ್ ರಾಮ್ ಯಾದವ್ ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ದಾರಸ್ ಪತ್ನಿ ಅವರು ತನ್ನ ಒಂದೂವರೆ ವರ್ಷದ ಮಗನ ಜೊತೆ ಜಮೀನಿಗೆ ಹೋಗಿದ್ದರು. ತಾಯಿ ವ್ಯವಸಾಯದಲ್ಲಿ ನಿರತರಾಗಿದ್ದಾಗ ಮಗು ಆಟವಾಡುತ್ತಾ ಜಮೀನಿನ ಬಳಿಯ ಕೊಳದ ಕಡೆಗೆ ಹೋಗಿತ್ತು.
ಇನ್ನು ತಾಯಿಗೆ ಮಗುವಿನ ಬಗ್ಗೆ ಎಚ್ಚರವಾಗಿತ್ತು. ಮಗು ಅತ್ತ-ಇತ್ತ ಕಾಣದಿದ್ದಾಗ ಕೊಳದ ಬಳಿ ಹುಡುಕಿದ್ದರು. ಆದರೆ ಅಷ್ಟರಲ್ಲಿ ಮಗು ಕೊಳದಲ್ಲಿ ಮುಳುಗಿತ್ತು. ಗಾಬರಿಗೊಂಡು ಅಲ್ಲಿದ್ದವರು ಕೆರೆಯಲ್ಲಿ ಮಗುವನ್ನು ಹುಡುಕಿ ಹೊರ ತೆಗೆದರು. ಮಗು ಪತ್ತೆಯಾಗಿದ್ದರೂ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಕೂಡಲೇ ಮಗುವನ್ನು ಲೇಮರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದರು.