ಡಾಟಿಯಾ: ನೆರೆಪೀಡಿತ ಪ್ರದೇಶಗಳ ಭೇಟಿಗೆ ತೆರಳಿದ್ದ ಸಚಿವರೇ ಪ್ರವಾಹದಲ್ಲಿ ಸಿಲುಕಿ ಪರದಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗೃಹ ಸಚಿವ ನರೋತ್ತಮ್ ಮಿಶ್ರಾ ದಾಟಿಯಾ ಪ್ರದೇಶದ ಹಳ್ಳಿಗಳಿಗೆ ತೆರಳಿದ್ದ ವೇಳೆ ಪ್ರವಾಹದಲ್ಲಿ ಸಿಲುಕಿದ್ದು, ಏರ್‌ಫೋರ್ಸ್ ಸಿಬ್ಬಂದಿ ಅವರನ್ನು ಏರ್ ಲಿಫ್ಟ್ ಮಾಡಿದ್ದಾರೆ.
ನರೋತ್ತಮ್ ಮಿಶ್ರಾ ಎನ್‌ಡಿಆರ್‌ಎಫ್‌ನ ಮೋಟಾರ್ ಬೋಟ್‌ನಲ್ಲಿ ಲೈಫ್ ಜಾಕೆಟ್ ಧರಿಸಿ ದಾಟಿಯಾದ ಕೊಟ್ರಾ ಗ್ರಾಮಕ್ಕೆ ತೆರಳಿದ್ದರು. ಕೆಲವು ಜನರು ಮನೆಯಲ್ಲಿ ಸಿಲುಕಿರುವುದನ್ನು ಗಮನಿಸಿದ ಸಚಿವರು ಮನೆಯ ಮೇಲ್ಛಾವಣಿಗೆ ತೆರಳಿದ್ದಾರೆ. ಆಗ ಎಸ್‌ಡಿಆರ್‌ಎಫ್ ತಂಡವು ಜನರನ್ನು ರಕ್ಷಿಸಿದೆ. ಏತನ್ಮಧ್ಯೆ, ನೀರಿನ ಹರಿವು ತುಂಬಾ ವೇಗ ಪಡೆದಿದ್ದು, ಮೋಟಾರ್ ಬೋಟ್ ಸಚಿವರ ಬಳಿ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಗೃಹ ಸಚಿವರು ಛಾವಣಿಯಿಂದ ಹೊರಬರಲಾಗಲಿಲ್ಲ. ಬಳಿಕ ಏರ್‌ಫೋರ್ಸ್ ಸಿಬ್ಬಂದಿಯು ಏರ್ಲಿಫ್ಟ್ ಮೂಲಕ ಸಚಿವರನ್ನು ಮೇಲಕ್ಕೆತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಭಾರಿ ಪ್ರವಾಹದಿಂದಾಗಿ 1000ಕ್ಕೂ ಅಧಿಕ ಹಳ್ಳಿಗಳು ಹಾನಿಗೊಳಗಾಗಿವೆ. ಸೇನೆ ಮತ್ತು ವಾಯುಪಡೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಕಾರ್ಯದಲ್ಲಿ ನಿರತವಾಗಿವೆ.
ಇದನ್ನೂ ಓದಿ: ಮೀನು ಹಿಡಿಯೋದ್ರಲ್ಲಿ ಪಪ್ಪು ಬ್ಯುಸಿ.. ರಾಹುಲ್ ಗಾಂಧಿಗೆ ನರೋತ್ತಮ್ ಮಿಶ್ರಾ ವ್ಯಂಗ್ಯ