ನವದೆಹಲಿ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ನಡುವೆ ಜನರು ಕೋವಿಡ್ ನಿಯಮಗಳನ್ನು ಪಾಲಿಸದ ಕಾರಣ ಲಾಕ್‌ಡೌನ್ ಜಾರಿಗೆ ತರಲು ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಆರೋಗ್ಯ ಸಚಿವ ರಾಜೇಶ್ ಟೋಪೆ, ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ, ವೈದ್ಯರು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ಕುರಿತ ಮಹತ್ವದ ಚರ್ಚೆ ನಡೆದಿದೆ.
ಸಭೆಯಲ್ಲಿ ಅಧಿಕಾರಿಗಳು ಮತ್ತು ಕೋವಿಡ್ ಕಾರ್ಯಪಡೆಯ ಸದಸ್ಯರು, ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೋಂಕಿತ ಪ್ರಕರಣಗಳ ಹೆಚ್ಚಳ ರಾಜ್ಯದಲ್ಲಿ ಕೋವಿಡ್ ಸಂಬಂಧಿತ ಸಾವುಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಕಾರ್ಯಪಡೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋಂಕು ಪ್ರಕರಣಗಳ ತೀವ್ರ ಏರಿಕೆಯಿಂದಾಗಿ, ರಾಜ್ಯವು ಆರೋಗ್ಯ ಬಿಕ್ಕಟ್ಟು ಎದುರಿಸಬಹುದು ಮತ್ತು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಉದ್ದೇಶಿಸಿರುವ ಮೂಲಸೌಕರ್ಯಗಳ ಕೊರತೆ ಉಂಟಾಗಬಹುದು ಎಂದು ಉದ್ಧವ್ ಠಾಕ್ರೆ ಕಳವಳ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಒಂದೇ ದಿನಕ್ಕೆ 3082 ಮಂದಿಗೆ ಸೋಂಕು.. 12 ಮಂದಿ ಬಲಿ
ಸರ್ಕಾರಿ ಕಚೇರಿಗಳು ಮತ್ತು ರಾಜ್ಯ ಸಚಿವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಜನರು ಕೊರೊನಾ ನಿಯಮಗಳನ್ನು ಪಾಲಿಸದ ಕಾರಣ ಸರ್ಕಾರ ಲಾಕ್‌ಡೌನ್ ವಿಧಿಸಲು ಮುಂದಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಪ್ರಸ್ತುತ ಲಭ್ಯವಿರುವ 3.75 ಲಕ್ಷ ಪ್ರತ್ಯೇಕ ಹಾಸಿಗೆಗಳಲ್ಲಿ 1.07 ಲಕ್ಷ ಹಾಸಿಗೆಗಳು ಈಗಾಗಲೇ ಭರ್ತಿ ಆಗಿವೆ. ಉಳಿದವು ವೇಗವಾಗಿ ಭರ್ತಿಯಾಗುತ್ತಿವೆ ಎಂದು ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಡಾ.ಪ್ರದೀಪ್ ವ್ಯಾಸ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಶನಿವಾರ ಮುಂಬೈನಲ್ಲಿ 6,123 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿಯಾಗಿದ್ದು,12 ಸಾವುಗಳು ಸಂಭವಿಸಿವೆ. ಆರೋಗ್ಯ ಇಲಾಖೆಯ ವರದಿ ಪ್ರಕಾರ, ಶನಿವಾರ ಮಹಾರಾಷ್ಟ್ರದಲ್ಲಿ 35,726 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ.