ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೀಟನಾಶಕ ಸೇವಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 16 ವರ್ಷದ ಬಾಲಕನಿಗೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದ ವೈದ್ಯರು ಶನಿವಾರ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಒಡಿಶಾದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ದಾನ ಮಾಡಿದ ಅಂಗಾಂಗ ಬಳಸಿ ಬಾಲಕನಿಗೆ ಮರು ಜೀವ ನೀಡಲಾಗಿದೆ.
ಇಲ್ಲಿನ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು 16 ವರ್ಷದ ಸ್ವಪ್ನಿಲ್ ಬಿಸ್ವಾಸ್ ಎಂಬ ಬಾಲಕನಿಗೆ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೈಗೊಂಡ ಮೊದಲ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಸ್ವಪ್ನಿಲ್ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಉತ್ತರ 24 ಪರಗಣ ಜಿಲ್ಲೆಯ ಬರಾಸತ್ ಪ್ರದೇಶದ ನಿವಾಸಿ. ಮೇ ತಿಂಗಳಲ್ಲಿ ತಂಪು ಪಾನೀಯದ ಬಾಟಲಿಯಲ್ಲಿ ಸಂಗ್ರಹಿಸಿಟ್ಟಿದ್ದ ಪ್ಯಾರಾಕ್ವಾಟ್ ಡೈಕ್ಲೋರೈಡ್ ಎಂಬ ಕೀಟನಾಶಕವನ್ನು ಆಕಸ್ಮಿಕವಾಗಿ ಸೇವಿಸಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಕೀಟನಾಶಕ ಸೇವನೆ ನಂತರ ಸ್ವಪ್ನಿಲ್‌ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇದರಿಂದ ಮೊದಲಿಗೆ ಬರಾಸತ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸ್ಥಿತಿ ಹದಗೆಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಪರೀಕ್ಷಿಸಿದಾಗ ಕೀಟನಾಶಕವು ವಿವಿಧ ಅಂಗಗಳನ್ನು ನಾಶಪಡಿಸುತ್ತದೆ. ತೀವ್ರವಾದ ಅಡ್ಡಪರಿಣಾಮಗಳು ಬೀರುವ ಬಗ್ಗೆ ಪತ್ತೆ ಹಚ್ಚಲಾಗಿತ್ತು. ಅಲ್ಲದೇ, ಮೂತ್ರಪಿಂಡ, ಯಕೃತ್ತು ಮತ್ತು ಶ್ವಾಸಕೋಶಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವ ಅಪಾಯವನ್ನೂ ವೈದ್ಯರು ಗುರುತಿಸಿದ್ದರು.
ಇದನ್ನೂ ಓದಿ: ಅಂಗಾಂಗ ದಾನದಿಂದ ಐವರಿಗೆ ಜೀವದಾನ.. ತಂದೆಯ ಸಾವಿನ ನೋವಲ್ಲೂ ಮಾನವೀಯತೆ ಮೆರೆದ ಮಕ್ಕಳು
ಇಷ್ಟೇ ಅಲ್ಲ, ಈಗಾಗಲೇ ಶ್ವಾಸಕೋಶಕ್ಕೆ ತೀವ್ರವಾದ ಹಾನಿಯಾಗಿರುವುದನ್ನು ವೈದ್ಯರು ಕಂಡುಕೊಂಡಿದ್ದರು. ಇದರಿಂದ ಶ್ವಾಸಕೋಶದ ಕಸಿ ಮಾಡುವುದು ಏಕೈಕ ಆಯ್ಕೆ ಆಗಿತ್ತು. ಇದರ ನಡುವೆಯೂ ಸತತ 37 ದಿನಗಳವರೆಗೆ ಕೃತಕ ಶ್ವಾಸಕೋಶ ಅಥವಾ ಇಸಿಎಂಒ ಬೆಂಬಲದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ. ಹೀಗಾಗಿ ಸ್ವಪ್ನಿಲ್ ಕುಟುಂಬಸ್ಥರು ದಾನಿಗಾಗಿ ಎದುರು ನೋಡುತ್ತಿದ್ದರು.
ಮತ್ತೊಂದೆಡೆ, ಕಳೆದ ಶನಿವಾರ ಒಡಿಶಾದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡ ಸುದ್ದಿ ಕುಟುಂಬಕ್ಕೆ ಗೊತ್ತಾಗಿತ್ತು. ಆಗ ಶ್ವಾಸಕೋಶಗಳು ಹೊಂದಾಣಿಕೆ ಬಗ್ಗೆ ವೈದ್ಯರು ಮೂಲಕ ಮಾಹಿತಿ ಸಂಗ್ರಹಿಸಿದ್ದರು. ಶ್ವಾಸಕೋಶಗಳನ್ನು ಸಂಗ್ರಹಿಸಲು ವೈದ್ಯರ ತಂಡ ಒಡಿಶಾಕ್ಕೂ ತೆರಳಿತ್ತು. ಆದರೆ, ಅದಕ್ಕೆ ತಲುಗುವ ವೆಚ್ಚ ತುಂಬಾ ಜಾಸ್ತಿ ಆಗ್ತಿತ್ತು. ಹೀಗಾಗಿ ಧನ ಸಹಾಯಕ್ಕಾಗಿ ಆಸ್ಪತ್ರೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸರ್ಕಾರ ಕೂಡಲೇ ಹೆಲ್ತ್ ಕಾರ್ಡ್ ಅಡಿಯಲ್ಲಿ 5 ಲಕ್ಷ ರೂ. ಮಂಜೂರು ಮಾಡಿತ್ತು.
ಅಂತೆಯೇ, ಶನಿವಾರ ಮಧ್ಯರಾತ್ರಿ ಸ್ವಪ್ನಿಲ್ ಶಸ್ತ್ರಚಿಕಿತ್ಸೆ ಆರಂಭಿಸಲಾಯಿತು. ಸುಮಾರು ಎಂಟು ಗಂಟೆಗಳ ಕಾಲ ವೈದ್ಯರಾದ ಕುನಾಲ್ ಸರ್ಕಾರ್, ಸೌಮ್ಯಜಿತ್ ಬೋಸ್ ಮತ್ತು ಸಪ್ತರ್ಷಿ ರಾಯ್ ಶ್ರಮಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಹಿಂದೆ ವಿವಿಧ ಅಂಗಾಂಗ ಕಸಿ ಮಾಡಲಾಗಿತ್ತು, ಆದರೆ, ಶ್ವಾಸಕೋಶ ಕಸಿ ಯಶಸ್ವಿಯಾಗಿ ನಡೆಸಿದ ಮೊದಲ ಖಾಸಗಿ ಆಸ್ಪತ್ರೆ ಇದಾಗಿದೆ ಎಂದು ಡಾ.ಕುನಾಲ್ ಸರ್ಕಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೆದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಆರು ಮಂದಿ ಜೀವ ಉಳಿಸಿದ ಯುವಕ