ನವದೆಹಲಿ: ಪಂಜಾಬ್‌ನ ಲುಧಿಯಾನದಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಆರೋಪಿ ಗುರುತು ಪತ್ತೆ ಹಚ್ಚಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಪಂಜಾಬ್‌ನ ಲುಧಿಯಾನದ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಆ ಮೃತದೇಹ ಆತ್ಮಾಹುತಿ ಬಾಂಬರ್‌ನದ್ದು ಎಂದು ನಂಬಲಾಗಿದೆ. ಆತ್ಮಾಹುತಿ ಬಾಂಬರ್ ಮಾಜಿ ಪೊಲೀಸ್ ಸಿಬ್ಬಂದಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸ್ಫೋಟ: ಆಘಾತ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎನ್ ವಿ ರಮಣ
ಮೂಲಗಳ ಪ್ರಕಾರ, ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿ ಮಾಜಿ ಪೊಲೀಸ್ ಸಿಬ್ಬಂದಿ ಗಗನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಖನ್ನಾದಲ್ಲಿನ ಸದರ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಸಿಂಗ್ನನ್ನು 2019 ರಲ್ಲಿ ಸೇವೆಯಿಂದ ವಜಾಗೊಳಿಸಲಾಯಿತು. 785 ಗ್ರಾಂ ಹೆರಾಯಿನ್ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ. ನಂತರ ಗಗನ್‌ದೀಪ್ ಸಿಂಗ್ನನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು.
![Ludhiana Court Blast](https://etvbharatimages.akamaized.net/etvbharat/prod-images/14004598_aiek.jpg)
ಪಂಜಾಬ್ ಪೊಲೀಸರು ಮತ್ತು ಎನ್‌ಐಎ ತಂಡ ಆರೋಪಿ ಗಗನ್‌ದೀಪ್ ನಿವಾಸದ ಮೇಲೆ ನಿನ್ನೆ ತಡರಾತ್ರಿ ದಾಳಿ ನಡೆಸಿತು. ಈ ವೇಳೆ ಪೊಲೀಸರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಚಿತ್ರಗಳು ಸಿಕ್ಕಿವೆ. ಗಗನ್‌ದೀಪ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪಂಜಾಬ್ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ.