ಲಖ್ನೌ: ರಾಜ್ಯದಲ್ಲಿ ಕೋವಿಡ್ -19 ಪರಿಸ್ಥಿತಿ ನಿರ್ವಹಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಿಎಂಗೆ ಪತ್ರ ಬರೆದು, ಟೆಸ್ಟ್ ದರ ಮತ್ತು ಹಾಸಿಗೆಗಳ ತೀವ್ರ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕೋವಿಡ್ -19 ರೋಗಿಗಳಿಗೆ ಹಾಸಿಗೆಗಳ ಕೊರತೆ ಇರುವುದರಿಂದ ಯುಪಿ ಸರ್ಕಾರವು ಎಲ್ಲಾ ಕೋವಿಡ್ ಆಸ್ಪತ್ರೆಗಳು ಮತ್ತು ಕೇಂದ್ರಗಳನ್ನು ಪುನಾರಂಭಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಗೆ 10 ಅಂಶಗಳ ಸಲಹೆಗಳನ್ನು ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿದ್ದಾರೆ.
ಜೀವ ರಕ್ಷಕ ಔಷಧಿಗಳ ಕೊರತೆ ಮತ್ತು ಆಮ್ಲಜನಕವು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಕೊರೊನಾ ಟೆಸ್ಟ್ ದರದ ಬಗ್ಗೆ ಕಳವಳ ವ್ಯಕ್ತಪಡಿಸಿ, ಕೋವಿಡ್ -19 ಪಾಸಿಟಿವ್ ರೋಗಿಗಳ ನೈಜ ಸಂಖ್ಯೆ ಮರೆಮಾಚಲಾಗುತ್ತಿದೆ. ಲಸಿಕೆ ನೀಡುವ ಪ್ರಮಾಣ ಬಹಳ ನಿಧಾನವಾಗಿದೆ. ಇಲ್ಲಿಯವರೆಗೆ ಒಂದು ಕೋಟಿಗಿಂತಲೂ ಕಡಿಮೆ ಜನಸಂಖ್ಯೆಗೆ ಲಸಿಕೆ ನೀಡಲಾಗಿದೆ ಎಂದಿದ್ದಾರೆ.
ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗೆ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಕಾಂಗ್ರೆಸ್ ನಾಯಕಿ ಒತ್ತಾಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಯೋಗಿ ಆದಿತ್ಯನಾಥ್ ಅವರಿಗೆ ನೀಡಿದ 10 ಸಲಹೆಗಳು ಇಲ್ಲಿವೆ..
1. ಎಲ್ಲಾ ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗಾಗಿ ಮೀಸಲಾದ ಆರ್ಥಿಕ ಪ್ಯಾಕೇಜ್ ಘೋಷಿಸಿ
2. ಈಗಾಗಲೇ ಮುಚ್ಚಿದ ಕೋವಿಡ್ ಆಸ್ಪತ್ರೆಗಳು ಮತ್ತು ಕೇಂದ್ರಗಳನ್ನು ಮರುಪ್ರಾರಂಭಿಸಿ. ಆಮ್ಲಜನಕ ಹಾಸಿಗೆಗಳನ್ನು ಹೆಚ್ಚಿಸಿ. ನಿವೃತ್ತ ವೈದ್ಯಕೀಯ ಅಧಿಕಾರಿಗಳು, ಶುಶ್ರೂಷೆ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಮರು ನೇಮಕ ಮಾಡಿಕೊಳ್ಳಿ
3. ಸರ್ಕಾರವು ಕೋವಿಡ್ ದತ್ತಾಂಶ ಮರೆಮಾಚಬಾರದು. ಸ್ಥಳೀಯ ಸಂಸ್ಥೆಗಳ ಮೂಲಕ ದಹನ ಸ್ಥಳಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು
4. ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸಿ. ಶೇ 80ರಷ್ಟು ಪರೀಕ್ಷೆಯು ಆರ್‌ಟಿ-ಪಿಸಿಆರ್ ಮೂಲಕ ಎಂದು ಖಚಿತಪಡಿಸಿಕೊಳ್ಳಿ. ಹಳ್ಳಿಗಳಲ್ಲಿ ಹೊಸ ಪರೀಕ್ಷಾ ಕೇಂದ್ರಗಳನ್ನು ತೆರೆಯಿರಿ
5. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹಳ್ಳಿಗಳಲ್ಲಿ ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ವಿತರಿಸಲು ಮುಂದಾಗಬೇಕು
6. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಾಕಷ್ಟು ಲಭ್ಯತೆ ಖಚಿತಪಡಿಸಿಕೊಳ್ಳಲು ಆಮ್ಲಜನಕ ಸಂಗ್ರಹ ನೀತಿ ಜಾರಿಗೆ ತನ್ನಿ. ಆಕ್ಸಿಜನ್ ಟ್ಯಾಂಕರ್‌ಗಳಿಗೆ ಆ್ಯಂಬುಲೆನ್ಸ್ ಜೋಡಿಸಿ
7. ಲಾಕ್ಡೌನ್ ಜಾರಿಯಿಂದ ಮನೆಗೆ ಮರಳಿದ ಎಲ್ಲಾ ಬಡ ಮತ್ತು ವಲಸೆ ಕಾರ್ಮಿಕರಿಗೆ ನಗದು ಬೆಂಬಲ ನೀಡಿ
8. ವ್ಯಾಕ್ಸಿನೇಷನ್ ಯೋಜನೆ ಸಮರೋಪಾದಿಯಾಗಿ ಹೊರಹೊಮ್ಮಲಿ. ಲಸಿಕೆಗಾಗಿ ಎಲ್ಲರಿಗೂ ಬಜೆಟ್ ಹಂಚಿಕೆ ಹೆಚ್ಚಿಸಿ. ವ್ಯಾಕ್ಸಿನೇಷನ್ ಮೊತ್ತದ 10,000 ಕೋಟಿ ರೂ. ಹೆಚ್ಚಳ ಮಾಡಿ
9. ನೇಕಾರರು, ಕುಶಲಕರ್ಮಿಗಳು, ಸಣ್ಣ ಅಂಗಡಿಯವರು ಮತ್ತು ವ್ಯಾಪಾರಿಗಳಿಗೆ ಸ್ಥಳೀಯ ತೆರಿಗೆ ಪರಿಹಾರ ನೀಡಿ. ವಿದ್ಯುತ್ ಬಿಲ್ ಮತ್ತು ನೀರಿನ ಶುಲ್ಕ ಮನ್ನಾ ಮಾಡಿ.
10. ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಕ್ಷೇತ್ರಗಳು ಸಹಾಯ ಪಡೆಯಬೇಕು ಎಂದು ಪತ್ರದಲ್ಲಿ ಪ್ರಿಯಾಂಕಾ ಉಲ್ಲೇಖಿಸಿದ್ದಾರೆ.