ನವದೆಹಲಿ: ಅಕ್ಟೋಬರ್ ಆರಂಭದಲ್ಲೇ ಗ್ರಾಹಕರಿಗೆ ತೈಲ ಕಂಪನಿಗಳು ಶಾಕ್ ನೀಡಿದ್ದು, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಈ ನಡುವೆ ಎಲ್ಪಿಜಿ ಸಿಲಿಂಡರ್ ದರದಲ್ಲೂ ಸಹ ಏರಿಕೆಯಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆ 43.50 ರೂಪಾಯಿ ಹೆಚ್ಚಿಸಲಾಗಿದೆ.
ಪೆಟ್ರೋಲಿಯಂ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ದರ ಪರಿಷ್ಕರಣೆ ನಡೆಸುತ್ತಿದ್ದು, ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 1,693 ರೂಪಾಯಿಯಿಂದ 1,736.50 ರೂಪಾಯಿಗೆ ಏರಿದೆ. ಆದರೆ 14.2 ಕೆ.ಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇತ್ತ ಕೋಲ್ಕತ್ತಾದಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 1,770.50 ರೂಪಾಯಿಯಿಂದ 1,805.50 ರೂಪಾಯಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಇದಕ್ಕೂ ಮೊದಲು ಸೆ.1ರಂದು ಎಲ್ಪಿಜಿ ಸಿಲಿಂಡರ್ ಬೆಲೆ 25ರೂಪಾಯಿ ಏರಿಕೆ ಕಂಡು 14ಕೆ.ಜಿ ಸಿಲಿಂಡರ್ ದರ 884.50 ರೂಪಾಯಿಗೆ ತಲುಪಿತ್ತು. ಆದರೆ, ಈ ತಿಂಗಳ ಆರಂಭದಲ್ಲಿ ಈ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸಿಎನ್ಜಿ ದರದಲ್ಲೂ ಏರಿಕೆ ಸಾಧ್ಯತೆ
ವಾಹನ ಸೇರಿದಂತೆ ಹಲವೆಡೆ ಬಳಕೆಯಾಗುವ ಸಿಎನ್ಜಿ ಅನಿಲ ದರವನ್ನು ಶೇ.64ರಷ್ಟು ಏರಿಸಲು ಕೇಂದ್ರ ಮುಂದಾಗಿದ್ದು, ಇದರಿಂದ ವಿದ್ಯುತ್ ಉತ್ಪಾದನೆ, ರಸಗೊಬ್ಬರ ತಯಾರಿಕೆ, ವಾಹನ ಬಳಕೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಬೆಲೆ ಏರಿಕೆ ಬಿಸಿ ತಗುಲುವ ಆತಂಕ ಎದುರಾಗಿದೆ.