ಕೋಝಿಕ್ಕೋಡ್ (ಕೇರಳ): ಇಲ್ಲಿ ನಡೆದ ಪ್ರೇಮ ವಿವಾಹವೊಂದು ರಾಜ್ಯದಲ್ಲಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಸಿಪಿಎಂ ಯುವ ಘಟಕದ ಡಿವೈಎಫ್‌ಐ ಮುಖಂಡ ಅನ್ಯ ಧರ್ಮದ ಜ್ಯೋತ್ಸ್ನಾ ಮೇರಿ ಜೋಸೆಫ್ರನ್ನು ಪ್ರೀತಿಸಿ ಮದುವೆಯಾಗಿದ್ದ ವಿಚಾರ ಈಗ ರಾಜ್ಯದಲ್ಲಿ ಚರ್ಚಾಸ್ಪದವಾಗಿದೆ.
ಏನಿದು ಘಟನೆ: ಇದೇ ತಿಂಗಳ 10ರಂದು ಮನೆಯಿಂದ ಯುವತಿ ಓಡಿ ಹೋಗಿದ್ದಳು. ಈ ವಿಷಯ ಮನೆಯಲ್ಲಿ ತಿಳಿದಿರಲಿಲ್ಲ. ಹೀಗಾಗಿ ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲಾಗಿ ಮೂರು ದಿನ ಕಳೆದ್ರೂ ಪೊಲೀಸರು ನಮ್ಮ ಮನೆ ಮಗಳನ್ನು ಹುಡುಕುತ್ತಿಲ್ಲ ಎಂದು ಗ್ರಾಮದ ಕೆಲವು ನಿವಾಸಿಗಳು ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿದ್ದರು.
ಮಗಳು ಹೇಳಿದ್ದೇನು? : ಈ ಮಧ್ಯೆ ಜ್ಯೋತ್ಸ್ನಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಾನು ಸ್ವಯಂಪ್ರೇರಣೆಯಿಂದ ಶಿಜಿನ್ ಜೊತೆ ಮನೆಬಿಟ್ಟು ಬಂದಿದ್ದೇನೆ ಅಂತಾ ಹೇಳಿದ್ದಾರೆ. ಆದರೆ ಆಕೆಯ ಕುಟುಂಬಸ್ಥರು ಮತ್ತು ಸಂಬಂಧಿಕರು ಇದನ್ನು ಒಪ್ಪಲಿಲ್ಲ. ಆಕೆಗೆ ಹೆದರಿಸಿ ಮತ್ತು ಒತ್ತಡ ಹಾಕಿ ವಿಡಿಯೋ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಓದಿ: ಕಲಬುರ್ಗಿ: ಲವ್ ಜಿಹಾದ್ ವಿರುದ್ಧ ಮಾತನಾಡಿದ ಶ್ರೀಗಳ ಮಠದ ಮೇಲೆ ಕಲ್ಲು ತೂರಾಟ
ಕೋರ್ಟ್ಗೆ ಹಾಜರಾದ ದಂಪತಿ: ಜ್ಯೋತ್ಸ್ನಾ ಮತ್ತು ಶಿಜಿನ್ ಕೋರ್ಟ್ ಹಾಜರಾಗುವಂತೆ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದರಂತೆ ಜ್ಯೋತ್ಸ್ನಾ ಮತ್ತು ಶಿಜಿನ್ ಹೈಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಜ್ಯೋತ್ಸ್ನಾ ‘ನಾನು ಪೋಷಕರೊಂದಿಗೆ ಹೋಗಲು ಸಿದ್ಧಳಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಂತರ ಹೈಕೋರ್ಟ್ ದಂಪತಿಯನ್ನು ಬಿಡುಗಡೆ ಮಾಡಿ ಕಳುಹಿಸಿತು.
ಪ್ರೇಮ ವಿವಾಹ ಒಪ್ಪದ ಸಿಪಿಐಎಂ: ಆದ್ರೆ ಸಿಪಿಐಎಂ ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿಯ ಸದಸ್ಯ ಗೋರ್ಜೆ ಎಂ ಥಾಮಸ್ ಮಾತನಾಡಿ, ಜ್ಯೋತ್ಸ್ನಾರನ್ನು ಮದುವೆಯಾಗಿದ್ದ ಶಿಜಿನ್ ನಿರ್ಧಾರದಿಂದ ಪಕ್ಷವು ದೂರ ಸರಿಯುತ್ತಿದೆ. ಶಿಜಿನ್ ಆಕೆಯನ್ನು ಮದುವೆಯಾದ ರೀತಿ ಸರಿಯಲ್ಲ. ಇದು ಕೋಮು ಸೌಹಾರ್ದತೆ ಹಾಳುಮಾಡುತ್ತದೆ ಎಂದು ಹೇಳಿದರು.
ಲವ್ ಜಿಹಾದ್: ಎಸ್‌ಡಿಪಿಐ ಮತ್ತು ಜಮಾತೆ ಇಸ್ಲಾಮಿಯಂತಹ ಸಂಘಟನೆಗಳು ಮುಸ್ಲಿಂಯೇತರ ಯುವತಿಯರನ್ನು ಬಲೆಗೆ ಬೀಳಿಸಿ ಲವ್ ಜಿಹಾದ್ ಮಾಡಲು ಪ್ರೋತ್ಸಾಹಿಸುತ್ತವೆ. ಇದು ಸಹ ಲವ್ ಜಿಹಾದ್ ಆಗಿದೆ ಎಂದು ಹೇಳಿದ ಥಾಮಸ್, ಶಿಜಿನ್ ತಮ್ಮ ಪ್ರೇಮ ವಿವಾಹಕ್ಕೆ ಪಕ್ಷದ ಒಪ್ಪಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಥಾಮಸ್ ವಿರುದ್ಧ ಗರಂ: ಥಾಮಸ್ ಅವರ ಈ ಹೇಳಿಕೆ ಕೇರಳ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತು. CPIM ಅನ್ನು ಟೀಕಿಸುವ ಬಹಳಷ್ಟು ಟೀಕಾಕಾರರಿಗೆ ಇದು ಆಹಾರವಾಗಿ ಪರಿಣಮಿಸಿತು. ಸಿಪಿಐಎಂ ಪಕ್ಷದ ವಿರುದ್ಧ ಟೀಕಾಕಾರರು ಹರಿಹಾಯ್ದರು.
ಓದಿ: ಲವ್ ಜಿಹಾದ್ ಪ್ರಕರಣದ ಮೊದಲ ತೀರ್ಪು ಪ್ರಕಟ: ಯೋಗಿ ಸರ್ಕಾರಕ್ಕೆ ಧನ್ಯವಾದ ಹೇಳಿದ ಸಂತ್ರಸ್ತೆಯ ಕುಟುಂಬ
ಥಾಮಸ್ ಹೇಳಿಕೆ ತಳ್ಳಿ ಹಾಕಿದ ಪಕ್ಷ: ಆದರೆ ಸಿಪಿಐಎಂ ಡಿವೈಎಫ್‌ಐ ಯುವ ಘಟಕವು ಥಾಮಸ್ ಹೇಳಿಕೆಯನ್ನು ತಳ್ಳಿಹಾಕಿದ್ದು, ಜ್ಯೋತ್ಸ್ನಾ ಅವರೊಂದಿಗಿನ ಶಿಜಿನ್ ಅಂತರ್ಧರ್ಮಿಯ ಮದುವೆ ಪ್ರಗತಿಪರ ಅಭಿಪ್ರಾಯಗಳನ್ನು ಹೊಂದಿರುವ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಲವ್ ಜಿಹಾದ್ ಎಂಬುದು ಕೇರಳದ ಜಾತ್ಯತೀತ ಪರಂಪರೆಯನ್ನು ನಾಶಪಡಿಸುವ ಕಟ್ಟುಕಥೆಯಾಗಿದೆ ಎಂದು ಡಿವೈಎಫ್‌ಐ ತನ್ನ ಫೇಸ್‌ಬುಕ್ ಪೋಸ್ಟ್ ಮಾಡಿದೆ.
ನಾಲಿಗೆ ಸ್ಲಿಪ್ ಆಗಿದೆ: ಸಿಪಿಐಎಂ ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿ ಪಿ ಮೋಹನನ್ ಕೂಡ ಥಾಮಸ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶಿಜಿನ್ ಮತ್ತು ಜ್ಯೋತ್ಸ್ನಾ ವಿವಾಹ ಲವ್ ಜಿಹಾದ್ ಅಲ್ಲ. ಶಿಜಿನ್ ಅವರ ಮದುವೆಯ ಬಗ್ಗೆ ಪ್ರತಿಕ್ರಿಯಿಸುವಾಗ ಜಾರ್ಜ್ ಥಾಮಸ್ ನಾಲಿಗೆ ಸ್ಲಿಪ್ ಆಗಿದೆ. ಅವರು ತಮ್ಮ ಈ ತಪ್ಪನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಪಿ ಮೋಹನನ್ ಹೇಳಿದ್ದಾರೆ.