ತಿರುವನಂತಪುರಂ: ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಗುರುವಾರ ಅಂಗೀಕರಿಸಿದ್ದು, ಇಲ್ಲಿನ ಬಿಜೆಪಿ ಶಾಸಕ ಓ. ರಾಜಗೋಪಾಲ್ ಕೂಡಾ ಇದನ್ನು ಬೆಂಬಲಿಸಿದ್ದಾರೆ.
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಧ್ವನಿ ಮತದಾನದ ಮೂಲಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಹೇಳಿದರು. ಇದಕ್ಕೆ ರಾಜಗೋಪಾಲ್ ಕೂಡ ಬೆಂಬಲವಾಗಿ ನಿಂತ ನಂತರ ವಿವಾದ ಭುಗಿಲೆದ್ದಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಶಾಸಕ, ನಾನು ನಿರ್ಣಯವನ್ನು ಬೆಂಬಲಿಸಿದ್ದೇನೆ. ಆದರೆ ಅದರಲ್ಲಿ ಕೆಲವು ಭಾಗಗಳನ್ನು ವಿರೋಧಿಸಿದ್ದೇನೆ. ನಾನು ವಿಧಾನಸಭೆಯಲ್ಲಿ ಸಾಮಾನ್ಯ ಒಮ್ಮತಕ್ಕೆ ಬದ್ಧನಾಗಿರುತ್ತೇನೆ ಮತ್ತು ಅದು ಪ್ರಜಾಪ್ರಭುತ್ವದ ಜೀವಾಳ ಎಂದಿದ್ದಾರೆ.
ಓದಿ: ಕೃಷಿ ಕಾನೂನುಗಳ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
ಕಾನೂನುಗಳ ಬಗ್ಗೆ ತಮ್ಮ ಪಕ್ಷದ ನಿಲುವೇನು? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ, ಒಬ್ಬರು ಒಮ್ಮತಕ್ಕೆ ಬದ್ಧರಾಗಿರಬೇಕು. ಅವರ ಬೆಂಬಲವು ವಿಧಾನಸಭೆಯ ನಿರ್ಣಯಕ್ಕೆ ಅನುಗುಣವಾಗಿರಬೇಕು ಎಂದರು.
ರೈತರ ಪ್ರತಿಭಟನೆಯನ್ನು ಮುಂದುವರಿಸುವುದರಿಂದ ದಕ್ಷಿಣ ರಾಜ್ಯದಲ್ಲಿ ಬಿಕ್ಕಟ್ಟು ಉಂಟಾಗುತ್ತದೆ ಎಂದಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಯಿಂದ ಕೇಂದ್ರ ಹಿಂದೆ ಸರಿಯುತ್ತಿದೆ. ದೇಶದ ಹಿತದೃಷ್ಟಿಯಿಂದ ಕೇಂದ್ರವು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದರು.