ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿದ್ದು, ನಿನ್ನೆ ಒಂದೇ ದಿನ ಬರೋಬ್ಬರಿ 25,833 ಕೋವಿಡ್ ಪ್ರಕರಣ ದಾಖಲಾಗಿವೆ. ಹೀಗಾಗಿ ಲಾಕ್ಡೌನ್ ಜಾರಿಯಾಗಬಹುದು ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಹೇರಿಕೆ ಒಂದು ಆಯ್ಕೆಯಾಗಿದೆ ಎಂದಿರುವ ಉದ್ಧವ್ ಠಾಕ್ರೆ, ಜನರು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ರಾಜ್ಯದಲ್ಲಿನ ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದಾಗ ಲಾಕ್ಡೌನ್ ನಮ್ಮ ಆಯ್ಕೆಯಾಗಿದ್ದು, ಆದರೆ ರಾಜ್ಯದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ ಎಂದಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಕೋವಿಡ್ 19 ಮಾರ್ಗಸೂಚಿ ಪಾಲನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೊನಾ: ಚಿತ್ರಮಂದಿರ, ಕಚೇರಿಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶ
ಸುದ್ದಿಗಾರರೊಂದಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಾವುದೇ ಹೆದರಿಕೆ ಇಲ್ಲದೇ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿರುವ ಕಾರಣ ಇಂದು ಹೊಸ ಮಾರ್ಗಸೂಚಿ ರಿಲೀಸ್ ಮಾಡಲಾಗಿದ್ದು, ಇದರ ಪ್ರಕಾರ ಸಿನಿಮಾ ಹಾಲ್ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಪುಣೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ನಾಗ್ಪುರ್ದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ.