ಹೈದರಾಬಾದ್: ಕೋವಿಡ್ ಉಲ್ಬಣ ತಡೆಯಲು ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ರಾಜಸ್ಥಾನದಲ್ಲಿ ಇಂದಿನಿಂದ ಮೇ 24ರವರೆಗೆ ಎರಡು ವಾರಗಳ ಕಾಲ ಲಾಕ್‌ಡೌನ್ ಘೋಷಣೆಯಾಗಿದೆ.
ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ದೇಶ ಸಿಲುಕಿದ್ದು, ದೆಹಲಿ ಸೇರಿದಂತೆ ಕೆಲ ರಾಜ್ಯಗಳು ತಕ್ಷಣವೇ ಎಚ್ಚೆತ್ತುಕೊಂಡು ಸಂಪೂರ್ಣ ಲಾಕ್‌ಡೌನ್ ಹೇರಿದ್ದವು. ಆದರೆ ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ರಾಜಸ್ಥಾನ ರಾಜ್ಯಗಳು ತಡವಾಗಿ ಲಾಕ್‌ಡೌನ್ ಘೋಷಿಸಿವೆ.
ಕರ್ನಾಟಕದಲ್ಲಿ ಸಂಪೂರ್ಣ ಲಾಕ್‌ಡೌನ್ ಅಲ್ಲವಾದರೂ ಇಲ್ಲಿಯವರೆಗೆ ಇದ್ದ ಕಠಿಣ ಕರ್ಫ್ಯೂ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆಯಲಿದ್ದು, ಬಳಿಕ ವ್ಯಾಪಾರಕ್ಕೆ ಯಾವುದೇ ಅವಕಾಶ ಇಲ್ಲ. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ನಡೆದುಕೊಂಡೇ ಹೋಗಬೇಕು. ಅನಗತ್ಯ ವಾಹನ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.
ಇದನ್ನೂ ಓದಿ: ಇಂದಿನಿಂದ 14 ದಿನ ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ : ಏನಿರುತ್ತೆ, ಏನಿರಲ್ಲ?
ಕೊರೊನಾಗೆ ಕಡಿವಾಣ ಹಾಕಲು ಅಧಿಕಾರಕ್ಕೆ ಬಂದ ಮರು ದಿನವೇ ಮುಖ್ಯಮಂತ್ರಿ ಸ್ಟಾಲಿನ್ ತಮಿಳುನಾಡಿನಲ್ಲಿ ಮೇ 10ರಿಂದ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 28,897 ಮಂದಿಯ ವರದಿ ಪಾಸಿಟಿವ್ ಬಂದಿದ್ದು, 236 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ರಾಜಸ್ಥಾನದಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆದೇಶಿಸಿದ್ದಾರೆ. ಅಲ್ಲದೇ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಯಾರೇ ರಾಜ್ಯಕ್ಕೆ ಪ್ರವೇಶಿಸಿದರು ಅವರು ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ. ರಾಜ್ಯದಲ್ಲಿ ಮೇ 9ರಂದು 17,921 ಕೋವಿಡ್ ಪ್ರಕರಣಗಳು ಹಾಗೂ 159 ಸಾವು ವರದಿಯಾಗಿವೆ.
ಏಪ್ರಿಲ್ 27ರಿಂದ ಮೇ 3ರವರೆಗೆ ಪುದುಚೇರಿ ಸರ್ಕಾರವು ವೈರಸ್ ಹರಡುವಿಕೆ ತಡೆಗಟ್ಟಲು ಕಠಿಣ ನಿರ್ಬಂಧಗಳನ್ನು ಹೇರಿತ್ತು. ಆದರೆ ಪರಿಸ್ಥಿತಿ ಹತೋಟಿಗೆ ಬಂದಿರಲಿಲ್ಲ. ಪುದುಚೇರಿ ನೂತನ ಸಿಎಂ ಆಗಿ ಎನ್.ರಂಗಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಾಗಿದೆ.