ಹಾಪುರ್ (ಉತ್ತರ ಪ್ರದೇಶ): ಸತ್ತ ಹಲ್ಲಿ ಬಿದ್ದ ಸಮೋಸಾ ಸೇವಿಸಿ ತಂದೆ ಹಾಗೂ ಮಗಳ ಆರೋಗ್ಯ ಹದಗೆಟ್ಟ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಮೋಸಾದಲ್ಲಿ ಹಲ್ಲಿ ಪತ್ತೆಯಾಗಿರುವ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ಕೊಟ್ವಾಲಿ ಪ್ರದೇಶದ ನಿವಾಸಿ ಮನೋಜ್ ಕುಮಾರ್ ಎಂಬುವರ ಪುತ್ರ ಅಜಯ್ ಬುಧವಾರ ಸ್ವೀಟ್ ಅಂಗಡಿಯೊಂದರಲ್ಲಿ ಐದು ಸಮೋಸಾಗಳನ್ನು ಖರೀದಿಸಿದ್ದರು. ಮನೋಜ್ ಕುಮಾರ್ ಅಂಗಡಿಯೊಂದನ್ನು ನಡೆಸುತ್ತಿದ್ದು, ಎರಡು ಸಮೋಸಾಗಳನ್ನು ತಮ್ಮ ತಂದೆಗೆ ಅಜಯ್ ಕೊಟ್ಟು ಉಳಿದ ಮೂರನ್ನು ಮನೆಗೆ ತೆಗೆದುಕೊಂಡು ಹೋಗಿದ್ದ. ಆದರೆ, ಮನೆಯಲ್ಲಿ ಸೇವಿಸಬೇಕಾದರೆ ಸಮೋಸಾದಲ್ಲಿ ಇಲಿ ಪತ್ತೆಯಾಗಿದೆ. ಇದನ್ನು ಕಂಡು ಗಾಬರಿಯಾದ ಕುಟುಂಬಸ್ಥರು ತಕ್ಷಣವೇ ಮನೋಜ್ ಕುಮಾರ್ ಅವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಅಲ್ಲದೇ, ಸಮೋಸಾ ಸೇವಿಸಬೇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಬಂದ್'ಬಸ್ತ್ಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾದ ಆಹಾರದಲ್ಲಿ ಸತ್ತ ಇಲಿ!
ಅಷ್ಟರಲ್ಲಿ ಒಂದೂವರೆ ಸಮೋಸಾ ಸೇವಿಸಿದ್ದ ಮನೋಜ್ ಕುಮಾರ್ ಕೂಡಲೇ ಎಲ್ಲವನ್ನೂ ವಾಂತಿ ಮಾಡಿದ್ದಾರೆ. ಆದರೂ, ಸ್ವಲ್ಪ ಹೊತ್ತಿನ ಬಳಿಕ ಅವರ ಆರೋಗ್ಯ ಕೊಂಚ ಹದಗೆಟ್ಟಿದೆ. ಇದಾದ ನಂತರ ಅವರು ಸುಧಾರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಮನೆಯಲ್ಲಿ ಸಮೋಸಾ ಸೇವಿಸಿದ್ದ ಮನೋಜ್ ಅವರ ಮಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಆದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಬಗ್ಗೆ ಮನೋಜ್ ಕುಟುಂಬಸ್ಥರು ಆಹಾರ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಹಾರ ಅಧಿಕಾರಿ ಓಂಪ್ರಕಾಶ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಸಮೋಸಾದಲ್ಲಿ ಹಲ್ಲಿ ಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಸಮೋಸಾ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇದರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ಸಮೋಸಾದಲ್ಲಿ ಹಲ್ಲಿ ಬಿದ್ದಿರುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲ ದಿನಗಳ ಹಿಂದೆ ಧೋಲಾನಾ ಪ್ರದೇಶದಲ್ಲಿ ಬಿರಿಯಾನಿ ತಿನ್ನುತ್ತಿದ್ದ ವೇಳೆ ಯುವಕನೊಬ್ಬನ ತಟ್ಟೆಯಲ್ಲಿ ಹಲ್ಲಿ ಪತ್ತೆಯಾದ ಘಟನೆ ವರದಿಯಾಗಿತ್ತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಆಹಾರ ಇಲಾಖೆ ತಂಡ ಸ್ಥಳಕ್ಕಾಗಮಿಸಿ ಬಿರಿಯಾನಿ ಮಾದರಿ ಪಡೆದು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿತ್ತು.
ಇದನ್ನೂ ಓದಿ: Rat in Food: ಚಿಕನ್ ಕರಿಯಲ್ಲಿ ಸತ್ತ ಇಲಿ ಮರಿ! ರೆಸ್ಟೋರೆಂಟ್ ಮ್ಯಾನೇಜರ್, ಇಬ್ಬರು ಕುಕ್ಗಳ ಬಂಧನ