ಚೆನ್ನೈ(ತಮಿಳುನಾಡು): ಲಿವಿಂಗ್ ಟುಗೆದರ್ ಅಥವಾ ಸಹಬಾಳ್ವೆಗೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇಲ್ಲ. ಲಿವಿಂಗ್ ಟುಗೆದರ್ನಲ್ಲಿ ಯಾವುದಾದರೂ ವಿವಾದವುಂಟಾದರೆ ಯಾವುದೇ ಕಾರಣಕ್ಕೂ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ನ್ಯಾಯಾಧೀಶರಾದ ಎಸ್.ವೈದ್ಯನಾಥನ್, ಆರ್.ವಿಜಯಕುಮಾರ್ ಅವರಿದ್ದ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಕೊಯಮತ್ತೂರು ಮೂಲದ ಆರ್.ಕಲೈಸೆಲ್ವಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾಗೊಳಿಸಿತ್ತು.
ವೈವಾಹಿಕ ಹಕ್ಕನ್ನು ಪುನರ್ ಸ್ಥಾಪಿಸುವಂತೆ ನೀಡುವಂತೆ ವಿಚ್ಛೇದನ ಕಾಯ್ದೆ-1869ರ ಸೆಕ್ಷನ್ 32ರ ಅಡಿಯಲ್ಲಿ ಕಲೈಸೆಲ್ವಿ ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಲಯ ಕಲೈಸೆಲ್ವಿ ಅವರ ಅರ್ಜಿಯನ್ನು 14 ಫೆಬ್ರವರಿ 2019ರಂದು ವಜಾಗೊಳಿಸಿತ್ತು.
ಇದನ್ನು ಕಲೈಸೆಲ್ವಿ ಹೈಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ನಲ್ಲಿಯೂ ಕೂಡಾ ಅರ್ಜಿ ರದ್ದಾಗಿದೆ. ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸದಿದ್ದಲ್ಲಿ, ದೀರ್ಘ ಸಹಬಾಳ್ವೆ ಅಥವಾ ಲಿವಿಂಗ್ ಟುಗೆದರ್ ನಡೆಸುತ್ತಿರುವವರು ಕಾನೂನು ಪ್ರಕಾರ ವೈವಾಹಿಕ ಹಕ್ಕುಗಳಿಗಾಗಿ ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇನ್ನು ಕಲೈಸೆಲ್ವಿಯು ಜೋಸೆಫ್ ಬೇಬಿ ಎಂಬಾತನ ಜೊತೆಗೆ 2013ರಿಂದ ವಾಸವಿದ್ದಳು. ಕೆಲವು ವರ್ಷಗಳ ಆತ ಆಕೆಯನ್ನು ತೊರೆದಿದ್ದನು. ಈ ಹಿನ್ನೆಲೆಯಲ್ಲಿ ಜೋಸೆಫ್ ಬೇಬಿಯೊಂದಿಗೆ ವಿವಾಹ ಸಂಬಂಧವನ್ನು ಪುನರ್ಸ್ಥಾಪಿಸುವಂತೆ ಕೋರ್ಟ್ಗೆ ಮೊರೆಹೋಗಿದ್ದಳು.
ಇದನ್ನೂ ಓದಿ: ಪತ್ನಿಯನ್ನು ಮೇಕಪ್‌ರಹಿತವಾಗಿ ನೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತಿ!