ಪಾಟ್ನಾ (ಬಿಹಾರ) : ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಬಿಹಾರದ ಜನಜೀವನ ಅಸ್ತವ್ಯಸ್ತವಾಗಿದೆ. ಬಿಹಾರದ ಹಲವು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಬರೋಬ್ಬರಿ 26 ಮಂದಿ 24 ಗಂಟೆಯೊಳಗೆ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದು ರೋಹ್ತಾಸ್‌ನಲ್ಲಿ 6 ಮಂದಿ ಹಾಗು ಬಕ್ಸಾರ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಹಸುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ ಮಹಿಳೆ ಕೂಡ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ.
ಜೆಹಾನಾಬಾದ್‌ನಲ್ಲಿ ಮೂವರು ಸಾವು : ನಿನ್ನೆ (ಮಂಗಳವಾರ) ಸಂಜೆ ವಿವಿಧೆಡೆ ಸಿಡಿಲು ಬಡಿದು 3 ಮಂದಿ ಸಾವನ್ನಪ್ಪಿದ್ದಾರೆ. ಮೊದಲ ಘಟನೆ ಜಿಲ್ಲೆಯ ಹುಲಸ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರುಸ್ತಮ್‌ಚಕ್ ಗ್ರಾಮದಲ್ಲಿ ಸಿಡಿಲು ಬಡಿದು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತಪಟ್ಟಿದ್ದಾನೆ. ಮತ್ತೊಂದೆಡೆ, ಎರಡನೇ ಘಟನೆ ಕಾಕೋ ಪೊಲೀಸ್ ಠಾಣೆ ವ್ಯಾಪ್ತಿಯ ಬಾಧರ್ ಗ್ರಾಮದಲ್ಲಿ ಹಸು ಮೇಯಿಸುತ್ತಿದ್ದಾಗ ಏಕಾಏಕಿ ಸುರಿದ ಮಳೆಗೆ ವ್ಯಕ್ತಿಯೊಬ್ಬ ಮೃತಪಟ್ಟರೇ, ಮೂರನೇ ಘಟನೆ ಪರಾಸ್ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ತಿಟೈ ಬಿಘಾ ಗ್ರಾಮದಲ್ಲಿ ಮಳೆ ಸುರಿಯುವ ವೇಳೆ ಸ್ನಾನ ಮಾಡುವಾಗ ಯುವಕನೊಬ್ಬ ಚಳಿಯಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬಂಕಾದಲ್ಲಿ ಇಬ್ಬರು ಸಾವು : ಭಾರಿ ಮಳೆಯೊಂದಿಗೆ ಸಿಡಿಲು ಬಡಿದು ಬಂಕಾದಲ್ಲಿ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುವಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಬ್ಬರಿಗೂ ಸಿಡಿಲು ಬಡಿದ ನಂತರ ಕುಟುಂಬಸ್ಥರು ಸಂಗ್ರಾಮಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಇಬ್ಬರೂ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಕತಿಹಾರ್‌ನಲ್ಲೂ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾರೆ.
ಜಮುಯಿಯಲ್ಲಿ ಹೆಣ್ಣು ಮಗು ಸೇರಿದಂತೆ ಮೂವರ ಸಾವು : ಜಮುಯಿ ಜಿಲ್ಲೆಯಲ್ಲಿ ಸಿಡಿಲು ಬಡಿದು 11 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮೃತಳನ್ನು ಗಿಧೌರ್ ಪೊಲೀಸ್ ಠಾಣೆ ವ್ಯಾಪ್ತಿಯ ರತನ್‌ಪುರ ಗ್ರಾಮದ ನಿವಾಸಿ ಸಾತೋ ಯಾದವ್ ಅವರ ಮಗಳು ಅಂಶು ಕುಮಾರಿ (11) ಎಂದು ಗುರಿತಿಸಲಾಗಿದೆ. ಬಾಲಕಿ ಎಮ್ಮೆ ಕರೆತರಲು ಸಿದ್ದೋಕ್ ವಾಹಿಯಾರ್ ಬಳಿ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ.
ಗಯಾದಲ್ಲಿ 2 ಮತ್ತು ಔರಂಗಾಬಾದ್‌ನಲ್ಲಿ ಒಬ್ಬರು ಸಾವು : ಗಯಾದಲ್ಲಿ ಸಿಡಿಲು ಬಡಿದು ಜನರ ಸಾವಿನ ಸುದ್ದಿ ಮುನ್ನೆಲೆಗೆ ಬರುತ್ತಿದಂತಯೇ ಕಮಲ್ ಬಿಘದಲ್ಲಿ ಯುವಕನೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ. ಇನ್ನು ಔರಂಗಾಬಾದ್‌ನ ದುಮ್ರಾ ಗ್ರಾಮದಲ್ಲಿ ಬಾಧರ್‌ಗೆ ತೆರಳಿದ್ದ ವೃದ್ಧ ರೈತನೊಬ್ಬ ಹಾಗು ಭಾಗಲ್ಪುರದ ಬಹಿಯಾರ್‌ನಲ್ಲಿ ಮಹಿಳೆ ಮತ್ತು ಅವರ ಮೊಮ್ಮಗಳು ಭಾರತಿ ಕುಮಾರಿ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಸುಪೌಲ್‌ನಲ್ಲಿಯೂ ಸಹ ಭಾರೀ ಮಳೆ ಮತ್ತು ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ.
ವಿಪತ್ತು ನಿರ್ವಹಣಾ ಇಲಾಖೆಯ ಎಚ್ಚರಿಕೆ : ವಿಪತ್ತು ನಿರ್ವಹಣಾ ಇಲಾಖೆಯಿಂದ ಜನರಿಗೆ ನಿರಂತರವಾಗಿ ಎಚ್ಚರಿಕೆ ನೀಡಲಾಗುತ್ತಿದೆ. ಮಳೆ ಪ್ರಾರಂಭವಾದಾಗ ಹೊಲ-ಗದ್ದೆಗಳಲ್ಲಿ ಕೆಲಸ ಮಾಡಬೇಡಿ. ಸುರಕ್ಷಿತವಾಗಿರುವ ಕಡೆ ಆಶ್ರಯ ಪಡೆಯಿರಿ. ಮರಗಳು ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲಬೇಡಿ. ಕಬ್ಬಿಣದ ರಾಡ್ ಇರುವ ಛತ್ರಿಗಳನ್ನು ಬಳಸಬೇಡಿ. ಮೊಬೈಲ್ ಸ್ವಿಚ್ ಆಫ್ ಮಾಡಿ ಎಂದು ಸೂಚನೆ ಕೊಟ್ಟಿದೆ. ಆದರೆ, ಈ ಸೂಚನೆಯನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತಿದ್ದು, ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ದುರ್ಘಟನೆಗಳು ಸಂಭವಿಸುತ್ತಿವೆ.
ಇದನ್ನೂ ಓದಿ : ಕೇರಳದಲ್ಲಿ ಮಳೆ ಆರ್ಭಟ: ಒಬ್ಬ ಸಾವು, ಉಕ್ಕಿಹರಿದ ನದಿಗಳು:ಇಡುಕ್ಕಿ ಜಿಲ್ಲೆಯಲ್ಲಿ ರೆಡ್ ಅಲರ್ಟ್