ಎರಡು ದಶಕಗಳ ಹಿಂದೆ ಹಿನ್ನೆಲೆ ಗಾಯಕಿಯಾಗಿ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದ, ಮುಂಬೈಯಲ್ಲಿ ನೆಲೆಸಿದ್ದ ಇಸ್ರೇಲ್ನ ಅತ್ಯಂತ ಪ್ರಸಿದ್ಧ ಹಾಗೂ ಏಕೈಕ ಬಾಲಿವುಡ್ ಗಾಯಕಿ ಲಿಯೋರಾ ಇಟ್ಜಾಕ್ ಅವರು ಸದ್ಯ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ಸದ್ಯ ತಮ್ಮ ಕುಟುಂಬದೊಂದಿಗೆ ಇಸ್ರೇಲ್ನ ಸೆಂಟ್ರಲ್ ಸೌತ್ ಹೋಮ್ನಲ್ಲಿ ಬಂಕರ್ಗಳಲ್ಲಿ ವಾಸಿಸುತ್ತಿದ್ದೇವೆ. ಇದು ಗಾಜಾದಿಂದ 40 ನಿಮಿಷಗಳಷ್ಟೇ ದೂರದಲ್ಲಿದೆ ಎಂದು ಹೇಳಿದ್ದಾರೆ.
"ಕ್ಷಿಪಣಿಗಳನ್ನು ಸ್ಫೋಟಿಸುತ್ತಿರುವ ಸದ್ದು ಕಿವಿಗೆ ಬೀಳುತ್ತಿದ್ದು, ಆ ಸ್ಫೋಟಕ್ಕೆ ನಾವು ನಾಶವಾಗುವ ಭಯ ನಿರಂತರವಾಗಿ ನಮ್ಮನ್ನು ಕಾಡುತ್ತಿದೆ. ಇಲ್ಲಿ ನಾವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇವೆ. ಈ ದಾಳಿಯಲ್ಲಿ ಬದುಕಿಳಿದ ಹಿರಿಯ ವ್ಯಕ್ತಿಗಳು ತಮ್ಮ ನೋವು, ಸಂಕಟವನ್ನು ಮೆಲುಕು ಹಾಕುತ್ತಿದ್ದಾರೆ. ಬದುಕುಳಿದಿರುವ ನಮ್ಮ ಕೆಲವು ಹಿರಿಯ ಪರಿಚಯಸ್ಥರನ್ನು ಹಮಾಸ್ ಒತ್ತೆಯಾಳಾಗಿ ಮಾಡಿಕೊಂಡಿದೆ" ಎಂದು ತಾವು ಇರುವ ಜಾಗ ಹಾಗೂ ಅಲ್ಲಿನ ದಾಳಿಯ ಭಯಾನಕತೆಯನ್ನು ವಿವರಿಸಿದ್ದಾರೆ.
ಶನಿವಾರದಿಂದ ಪ್ರಾರಂಭಗೊಂಡಿರುವ ಇಸ್ರೇಲ್ ಮೇಲೆ ಹಮಾಸ್ ಭಯಾನಕ ದಾಳಿಯನ್ನು ನೆನಪಿಸಿಕೊಂಡಿರುವ ಲಿಯೋರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ, "ತಮ್ಮ 16 ವರ್ಷದ ಮಗಳು ಮೊಬೈಲ್ ನೋಡುತ್ತಿದ್ದಾಗ ದಾಳಿ ಬಗ್ಗೆ ಅಲಾರ್ಮ್ ಬಂದಿದೆ. ನಾವು ಹಬ್ಬಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ದಾಳಿ ನಡೆದಿದೆ. ನಾನು ಮನೆಯಲ್ಲಿ ಮಲಗಿದ್ದಾಗ ಮಗಳು ಓಡಿ ಬಂದು ಬಾಂಬ್ ದಾಳಿ ಮತ್ತು ದುಷ್ಕೃತ್ಯದ ಬಗ್ಗೆ ನನಗೆ ಹೇಳಿದಳು" ಎಂದು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಇಸ್ರೇಲ್ ಹಾಗೂ ಭಾರತದ ರಾಷ್ಟ್ರಗೀತೆಗಳನ್ನು ಹಾಡಲು ಇಟ್ಜಾಕ್ ಅವರನ್ನು ಆಯ್ಕೆ ಮಾಡಲಾಗಿತ್ತು. 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಇಸ್ರೇಲ್ ಭೇಟಿಯ ಗೌರವಾರ್ಥ ಆಯೋಜಿಸಿದ್ದ ಔತಣಕೂಟದಲ್ಲಿ ಹಾಡಲು ಇಸ್ರೇಲ್ ಅಧ್ಯಕ್ಷರ ಕಚೇರಿಯಿಂದ ಲಿಯೋರಾ ಅವರನ್ನು ಆಯ್ಕೆ ಮಾಡಲಾಗಿತ್ತು.
ಗುಜರಾತ್ನ ಭಾರತೀಯ ಯಹೂದಿ (ಬೆನೆ ಇಸ್ರೇಲ್) ಪೋಷಕರಿಗೆ ಲೋಡ್‌ನಲ್ಲಿ ಜನಿಸಿದ ಇಟ್ಜಾಕ್ ತಮ್ಮ 16 ನೇ ವಯಸ್ಸಿಗೆ ಭಾರತಕ್ಕೆ ಬಂದಿದ್ದರು. ಬಾಲಿವುಡ್ನ ಮಾಲಾ ಮಾಲಾ ಹಾಡು ಅವರಿಗೆ ಹೆಚ್ಚು ಫೇಮ್ ತಂದು ಕೊಟ್ಟಿತ್ತು. ಲಿಯೋರಾ ಅವರು ಭಾರತದಲ್ಲಿದ್ದಾಗ ಕುಮಾರ್ ಸಾನು, ಉದಿತ್ ನಾರಾಯಣ್, ಹಾಗೂ ಸೋನು ನಿಗಮ್ ಅವರೊಂದಿಗೆ ಯುಗಳ ಗೀತೆಗಳನ್ನು ಹಾಡಿದ್ದಾರೆ. 1991 ಹಾಗೂ 1997ರ ನಡುವೆ ಲಿಯೋರಾ ಭಜನೆ ಹಾಗೂ ಗಜಲ್ಗಳನ್ನೂ ಹಾಡಿದ್ದರು.
ಎಂಟು ವರ್ಷಗಳ ಕಾಲ ತಮ್ಮ ಹೆತ್ತವರು ಹಾಗೂ ಒಡಹುಟ್ಟಿದವರಿಂದ ದೂರವಾಗಿ ಭಾರತದಲ್ಲಿದ್ದ ಲಿಯೋರಾ ಅವರು 23ನೇ ವಯಸ್ಸಿಗೆ ಮತ್ತೆ ಇಸ್ರೇಲ್ಗೆ ಮರಳಿದ್ದರು. ಬಾಲಿವುಡ್ ಮಾತ್ರವಲ್ಲದೆ ಲಿಯೋರಾ ಅವರು ಇಸ್ರೇಲಿ ಸಂಗೀತ ಪ್ರಪಂಚದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ತು ಹೈ ಮೇರಾ ಪ್ಯಾರ್ ಪೆಹ್ಲಾ - ಹಿಂದಿ ಹಾಗೂ ಹಿಬ್ರೂ ಪದಗಳ ಹಾಡು ಅವರನ್ನು ಇಸ್ರೇಲ್ನಲ್ಲಿ ಮನೆ ಮಾತಾಗಿಸಿತ್ತು.
ಇದನ್ನೂ ಓದಿ: ICC Cricket World Cup 2023: ಭಾರತ ಪಾಕಿಸ್ತಾನ ಪಂದ್ಯ ಪೂರ್ವ ಪ್ರದರ್ಶನ, ಮೋಡಿ ಮಾಡಲಿದ್ದಾರೆ ಅರ್ಜಿತ್ ಸಿಂಗ್