ಅಮರಾವತಿ(ಆಂಧ್ರಪ್ರದೇಶ): ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದ ಮೇಲಿರುವ ಪೆಗಾಸಸ್ ಸ್ಪೈವೇರ್ ಖರೀದಿ ಮತ್ತು ಅಕ್ರಮ ಬಳಕೆ ಆಪಾದನೆ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸಲು ಆಂಧ್ರಪ್ರದೇಶ ಸರ್ಕಾರ ಸೋಮವಾರ ನಿರ್ಧರಿಸಿದೆ.
ಹಿಂದಿನ ಟಿಡಿಪಿ ಸರ್ಕಾರ ಖಾಸಗಿ ವ್ಯಕ್ತಿಗಳ ದೂರವಾಣಿ ಸಂಭಾಷಣೆಯನ್ನು ಟ್ಯಾಪ್ ಮಾಡಲು ಸ್ಪೈವೇರ್ ಅನ್ನು ಖರೀದಿಸಿದೆ ಎಂದು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಆರೋಪಿಸಿದ್ದು, ಈ ಬಗ್ಗೆ ಇಂದು ವಿಧಾನ ಪರಿಷತ್ತು ಮತ್ತು ವಿಧಾನಸಭೆಯಲ್ಲಿ ಸಂಕ್ಷಿಪ್ತ ಚರ್ಚೆ ನಡೆಯಿತು.
ವಿಧಾನಸಭೆಯಲ್ಲಿ ವಿಧಾನಪರಿಷತ್ ಸಚಿವ ಬುಗ್ಗನ ರಾಜೇಂದ್ರನಾಥ್ ಅವರು, ಚಂದ್ರಬಾಬು ಸರ್ಕಾರ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಸ್ಪೈವೇರ್ ತಂತ್ರಜ್ಞಾನವನ್ನು ಖರೀದಿಸಿದೆ ಎಂಬುದು ಮಮತಾ ಬ್ಯಾನರ್ಜಿ ಅವರ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತದೆ ಎಂದು ಹೇಳುವ ಮೂಲಕ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಿದರು.
ಸದನ ಸಮಿತಿ ಏಕೆ?: ಚಂದ್ರಬಾಬು ಆಡಳಿತದ ಸರ್ಕಾರ ವ್ಯಕ್ತಿಗಳ ಫೋನ್ ಮತ್ತು ಇತರ ಗ್ಯಾಜೆಟ್‌ಗಳನ್ನು ಹ್ಯಾಕ್ ಮಾಡಿ, ಸಂಭಾಷಣೆಗಳನ್ನು ಕೇಳಲು ಮತ್ತು ಅವರ ಕಾರ್ಯ ಚಟುವಟಿಕೆಗಳನ್ನು ಲೈವ್ ಆಗಿ ವೀಕ್ಷಿಸಲು ಇಂತಹ ತಂತ್ರಜ್ಞಾನವನ್ನು ಖರೀದಿಸಿದೆ ಎಂಬುದು ಸ್ಪಷ್ಟವಾಗಿದೆ. ರಾಜಕೀಯ ನಾಯಕರು, ಅದರಲ್ಲೂ ವಿರೋಧ ಪಕ್ಷದ ನಾಯಕರು, ಕೈಗಾರಿಕೋದ್ಯಮಿಗಳು, ಚಿತ್ರರಂಗದ ವ್ಯಕ್ತಿಗಳು ಅವರ ಮುಖ್ಯ ಗುರಿ. ಈ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಕೂಡ ಸಮಿತಿಯನ್ನು ರಚಿಸಿದೆ. ರಾಷ್ಟ್ರಮಟ್ಟದಲ್ಲಿ ಇಂತಹ ಗಂಭೀರ ಆರೋಪಗಳು ಬಂದಿರುವುದರಿಂದ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಅವರು ಹೇಳಿದರು.
ಯಾವುದೇ ತನಿಖೆಗೆ ಸಿದ್ಧ ಎಂದ ಟಿಡಿಪಿ: ಇದಕ್ಕೆ ಪ್ರತಿಕ್ರಿಯಿಸಿರುವ ಟಿಡಿಪಿ, ತಾವು ಯಾವುದೇ ರೀತಿಯ ತನಿಖೆಗೂ ತಯಾರಾಗಿದ್ದೇವೆ. ಸದನ ಸಮಿತಿಯಾಗಲಿ, ನ್ಯಾಯಾಂಗ ತನಿಖೆಯಾಗಲಿ ಅಥವಾ ಸಿಬಿಐ ತನಿಖೆಯಾಗಲಿ ಯಾವುದೇ ತನಿಖೆಗೂ ನಾವು ಸಿದ್ಧ ಎಂದು ಹೇಳಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪೈವೇರ್ ಕುರಿತು ಆರೋಪ ಮಾಡಿದ ನಂತರ ಈ ಕೋಲಾಹಲ ಆರಂಭವಾಗಿದ್ದು, ಈ ಬಗ್ಗೆ ನಿಜವಾಗಿಯೂ ಮಮತಾ ಬ್ಯಾನರ್ಜಿ ಅವರು ಏನಾದರೂ ಮಾತನಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ನನ್ನ ಬೆಂಗಾಳಿ ಸ್ನೇಹಿತೆಯೊಬ್ಬರು ಮಮತಾ ಅವರು ಬೆಂಗಾಳಿ ಭಾಷೆಯಲ್ಲಿ ಮಾತನಾಡುವುದರಲ್ಲಿ ಪೆಗಾಸಸ್ ಎಂಬ ಪದದ ಉಲ್ಲೇಖವೂ ಇಲ್ಲ ಎಂದು ಹೇಳಿದ್ದಾರೆ. ಆದರೂ, ವೈಎಸ್‌ಆರ್‌ಸಿ ಕಾರ್ಯಕರ್ತರು ಸಮಸ್ಯೆಯನ್ನು ದೊಡ್ಡದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಪರಿಷತ್ತಿನ ಬ್ಯುಸಿನೆಸ್ ಅಜೆಂಡಾದಲ್ಲಿ ಇದನ್ನು ಪಟ್ಟಿ ಮಾಡದಿದ್ದರೂ ಸರ್ಕಾರ ಪೆಗಾಸಸ್ ಕುರಿತು ಬೇಕಂತಲೇ ಚರ್ಚೆಯನ್ನು ಕೈಗೆತ್ತಿಕೊಂಡಿದೆ ಎಂದು ಟಿಡಿಪಿ ವಿಧಾನ ಪರಿಷತ್ ಸದಸ್ಯ ಮತ್ತು ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ದೂರಿದರು.
ಹಿಂದಿನ ಡಿಜಿಪಿ ಡಿ.ಜಿ. ಸವಾಂಗ್ ಅವರೇ ಅಂತಹ ಯಾವುದೇ ಸಾಫ್ಟ್‌ವೇರ್ ಅನ್ನು ಸರ್ಕಾರ ಖರೀದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈಎಸ್‌ಆರ್‌ಸಿ ಆರೋಪಿಸಿರುವಂತೆ ಸಾಫ್ಟ್‌ವೇರ್ ಅನ್ನು ವ್ಯಕ್ತಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ನಾವು ಮಾರಾಟ ಮಾಡಿಲ್ಲ ಎಂದು ಇಸ್ರೇಲ್ ರಾಯಭಾರಿ ಕೂಡ ಹೇಳಿದ್ದಾರೆ. ಯಾವುದೇ ವಿಚಾರಣೆಗೆ ನಾವು ಸಿದ್ಧರಿದ್ದೇವೆ ಎಂದು ಲೋಕೇಶ್ ಇದೇ ವೇಳೆ ಸ್ಪಷ್ಟಪಡಿಸಿದರು.
ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಐಪಿಎಸ್ ಅಧಿಕಾರಿ ಎ.ಬಿ.ವೆಂಕಟೇಶ್ವರ ರಾವ್, ನಾನು ಗುಪ್ತಚರ ಮುಖ್ಯಸ್ಥನಾಗಿದ್ದವರೆಗೆ ಪೆಗಾಸಸ್ ಅಥವಾ ಅಂತಹ ಯಾವುದೇ ಸ್ಪೈವೇರ್ ಅನ್ನು ಖರೀದಿಸಿಲ್ಲ. 2019 ಮೇ ನಂತರ ಏನಾದರೂ ಖರೀದಿಸಲಾಗಿದೆಯೇ ಎಂಬುದನ್ನು ಈಗಿನ ಸರ್ಕಾರಕ್ಕೆ ಕೇಳಬೇಕು. ಜಗನ್ ಸರ್ಕಾರ ಆರೋಪ ಮಾಡಿರುವಂತಹ ಯಾವುದೇ ಸಾಫ್ಟ್‌ವೇರ್ ಅನ್ನು ಎಂದಿಗೂ ಖರೀದಿ ಮಾಡಲಾಗಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.