ನವದೆಹಲಿ: ಸಂಗೀತ ಶಾರದೆ, ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸ್ವರವನ್ನು ಯಾರೊಬ್ಬರೂ ಕೂಡ ಹೊಂದಿಸಲಾರರು. ಮೇರು ವ್ಯಕ್ತಿತ್ವ ಕಣ್ಮರೆಯಾಗಿದ್ದು, ಚಿತ್ರರಂಗ ಮತ್ತು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಹೇಳಿದ್ದಾರೆ.
'ಈಟಿವಿ ಭಾರತ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಲತಾ ಮಂಗೇಶ್ಕರ್ ಅವರು ಹಾಡು ನಿಲ್ಲಿಸಿದ ಬಳಿಕ ಸಂಗೀತ ಲೋಕದಲ್ಲಿ ಶೂನ್ಯ ಆವರಿಸಿಕೊಂಡಿದೆ. ಸಂಗೀತದ ರಾಣಿ ಹಾಡಿದ ಹಾಡುಗಳು ಜನಮಾನಸದಲ್ಲಿ ಎಂದಿಗೂ ಚಿರಸ್ಥಾಯಿ. ಲತಾ ಅವರು ದೇಶ - ವಿದೇಶಗಳಲ್ಲಿ ಅವರ ಹಾಡಿಗೆ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದರು.
ನಾನು ಅವರ ಹಾಡುಗಳ ಉತ್ಕಟ ಅನುಯಾಯಿ. ಅವರ ಹಾಡು ಮತ್ತು ವ್ಯಕ್ತಿತ್ವ ನಮಗೆ ಸ್ಫೂರ್ತಿಯಾಗಿತ್ತು. ಸಂಗೀತದ ರಾಣಿಯ ಪರಲೋಕ ಪಯಣ ನನ್ನನ್ನು ಶೂನ್ಯವಾಗಿಸಿದೆ ಎಂದು ನೊಂದು ನುಡಿದರು. 92 ನೇ ವಯಸ್ಸಿನಲ್ಲಿಯೂ ಅವರು ಫಿಟ್ ಮತ್ತು ಫೈನ್ ಆಗಿದ್ದರು. ಲತಾ ಜೀ ಅವರು ತಮಾಷೆ ಮತ್ತು ಸ್ನೇಹಪರ ಜೀವಿಯಾಗಿದ್ದರು. ಎಲ್ಲ ನಾಯಕಿಯರಿಗೆ ಧ್ವನಿ ನೀಡಿದ್ದಾರೆ. ಅವರ ಸುಮಧುರ ಕಂಠವೇ ಹಾಡಿನ ಜೀವಾಳವಾಗಿತ್ತು ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನದ ಜನರು ಕೂಡ ಲತಾ ಜಿ ಅವರನ್ನು ಸ್ಮರಿಸುತ್ತಾರೆ. ಅವರ ನಿಧನದ ಬಳಿಕ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞನಾಗಿದ್ದೇನೆ. ಲತಾ ಜಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಆತ್ಮೀಯತೆಯನ್ನು ಹೊಂದಿದ್ದರು. ಅಲ್ಲದೇ ಅವರು ಕ್ರಿಕೆಟ್‌ನ ಅಭಿಮಾನಿಯಾಗಿದ್ದರು ಎಂದೆಲ್ಲಾ ಸ್ಮರಿಸಿಕೊಂಡರು.