ಹೈದರಾಬಾದ್: ಪೂಂಚ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಐವರು ಯೋಧರಾದ ಹವ್ ಮನ್‌ದೀಪ್ ಸಿಂಗ್, ಎಲ್ಎನ್‌ಕೆ ಕುಲವಂತ್ ಸಿಂಗ್, ಸೆಪ್ ಸೇವಕ್ ಸಿಂಗ್ ಹಾಗೂ ಸೆಪ್ ಹರ್‌ಕ್ರಿಶನ್ ಸಿಂಗ್ ಎಂಬ ಪಂಜಾಬ್‌ನ ಸ್ಥಳೀಯರು ಮತ್ತು ಒಡಿಶಾ ಮೂಲದ ಎಲ್ಎನ್‌ಕೆ ದೇಬಾಶಿಶ್ ಬಿಸ್ವಾಲ್ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಗಳಿಗೆ ಶನಿವಾರ ಕರೆತರಲಾಯಿತು.
ರಾಷ್ಟ್ರೀಯ ರೈಫಲ್ಸ್ 49 ಘಟಕಕ್ಕೆ ಸೇರಿದ್ದ ಮೃತ ಯೋಧರು: ಅಗಲಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ಜನರು ನೆರೆದಿದ್ದರು. ಮೃತ ಯೋಧರನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅವರು ಸೇನೆಯ ರಾಷ್ಟ್ರೀಯ ರೈಫಲ್ಸ್ 49 ಘಟಕಕ್ಕೆ ಸೇರಿದ್ದರು. ಹವ್ ಮಂದೀಪ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಲುಧಿಯಾನ ಜಿಲ್ಲೆಯ ಚಂಕೋಯನ್ ಕಲಾನ್‌ನಲ್ಲಿರುವ ಅವರ ಸ್ವಗ್ರಾಮಕ್ಕೆ ತರಲಾಯಿತು. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಜನರು ಸೇರಿದ್ದರು. ಯೋಧನ ಅಗಲಿಕೆಯಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ಅತೀಕ್, ಅಶ್ರಫ್ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದ ಅಲ್ ಖೈದಾ
ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ: ಸೆಪ್ ಸೇವಕ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಬಟಿಂಡಾದ ತಲ್ವಾಂಡಿ ಸಬೋ ಉಪವಿಭಾಗದಲ್ಲಿರುವ ಅವರ ಸ್ವಗ್ರಾಮಕ್ಕೆ ತರಲಾಯಿತು. ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಲು ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು. 2018ರಲ್ಲಿ ಭಾರತೀಯ ಸೇನೆಗೆ ಸೇರಿದ ಸೇವಕ್ ಸಿಂಗ್ ಸುಮಾರು 20 ದಿನಗಳ ಹಿಂದೆಯೇ ರಜೆ ತೆಗೆದುಕೊಂಡ ನಂತರ, ತಮ್ಮ ಕರ್ತವ್ಯಕ್ಕೆ ಮರಳಿದ್ದರು. ಎಎಪಿ ಶಾಸಕಿ ಬಲ್ಜಿಂದರ್ ಕೌರ್ ಮತ್ತು ಗಾಯಕ ಸಿಧು ಮೂಸೆವಾಲಾ ಅವರ ತಂದೆ ಕೂಡ, ವೀರ ಯೋಧನಿಗೆ ನಮನ ಸಲ್ಲಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ: ಬಾರ್ ಕೋಡ್ ಬಳಸಿ ನಕಲಿ ಟಿಕೆಟ್ ಸೃಷ್ಟಿ.. ಬೆಂಗಳೂರಲ್ಲಿ ಫೇಕ್ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮರ ಬಂಧನ
ಹುತಾತ್ಮ ಯೋಧನಿಗೆ ಕಂಬನಿಯ ವಿದಾಯ: ಸಿಪಾಯಿ ಹರ್ಕಿಶನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಗುರುದಾಸ್‌ಪುರಕ್ಕೆ ತರಲಾಯಿತು. ವೀರಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಲು ಗ್ರಾಮಸ್ಥರೊಂದಿಗೆ ಕುಟುಂಬಸ್ಥರು, ಸ್ನೇಹಿತರು ಜಮಾಯಿಸಿದ್ದರು. ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಮೊಗಾದ ಚಾಡಿಕ್ ಗ್ರಾಮಕ್ಕೆ ತರಲಾಯಿತು. ಹುತಾತ್ಮ ಯೋಧನಿಗೆ ಇಡೀ ಗ್ರಾಮವೇ ಕಂಬನಿ ಮಿಡಿಯಿತು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಹತ್ಯಾ ದಾಳಿ ಬೆದರಿಕೆ: ಪೊಲೀಸರ ಭದ್ರತಾ ವಿವರವೂ ಸೋರಿಕೆ
ಲ್ಯಾನ್ಸ್ ನಾಯಕ್ ದೇಬಶಿಶ್ ಬಸ್ವಾಲ್ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಅವರ ತವರೂರು ಒಡಿಶಾದ ಪುರಿಗೆ ತರಲಾಯಿತು. ಅವರ ಕುಟುಂಬ, ಸ್ನೇಹಿತರು ಮತ್ತು ಸ್ಥಳೀಯರು, ಯೋಧ ದೇಬಶಿಶ್ ಅವರಿಗೆ ಅಂತಿಮ ವಿದಾಯ ಹೇಳಿದರು.
ಇದನ್ನೂ ಓದಿ: ಮದ್ರಾಸ್ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಕಳೆದ 3 ತಿಂಗಳಲ್ಲಿ 4 ವಿದ್ಯಾರ್ಥಿಗಳು ಸಾವಿಗೆ ಶರಣು