ಶಿಮ್ಲಾ(ಹಿಮಾಚಲ ಪ್ರದೇಶ): ಕಳೆದ ಕೆಲ ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಇದರಿಂದ ಅನೇಕ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಹೀಗಾಗಿ, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿ ನಿರ್ಗತಿಕರಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಶಿಮ್ಲಾದ ಸಂಜೌಲಿ ಮುಂಭಾಗದ ಧಾಲಿ ಸುರಂಗದ ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ.
ಭೂಕುಸಿತದಿಂದಾಗಿ ರಸ್ತೆ ಮೇಲೆ ಮಲಗಿದ್ದ ಮೂವರು ಬಾಲಕಿಯರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಈ ವೇಳೆ, ಬಾಲಕಿಯೊಬ್ಬಳು ರಕ್ಷಣೆಗೋಸ್ಕರ ಹಾತೊರೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಕಲ್ಲಿನ ಕೆಳಗೆ ಸಿಲುಕಿಕೊಂಡಿರುವ ಬಾಲಕಿ ತನ್ನ ಪ್ರಾಣ ರಕ್ಷಣೆ ಮಾಡುವಂತೆ ಕೈ ಬೀಸಿ ಬೇಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಘಟನೆಯಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಚಿಕಿತ್ಸೆಗೋಸ್ಕರ ಐಜಿಎಂಸಿಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿರಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: 6 ಜನರು ನಾಪತ್ತೆ
ಲಭ್ಯವಾಗಿರುವ ಮಾಹಿತಿ ಪ್ರಕಾರ, ರಸ್ತೆ ಬದಿಯಲ್ಲಿ ಕುಟುಂಬವೊಂದು ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿತ್ತು. ಭೂಕುಸಿತ ಉಂಟಾಗಿರುವ ಕಾರಣ ಮೂವರು ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ,ಇಬ್ಬರ ಪ್ರಾಣ ಉಳಿಸಲಾಗಿದೆ. ನಿರಂತರ ಮಳೆಯಿಂದಾಗಿ ಮಣಿಕರ್ನ್ ಪ್ರದೇಶದಲ್ಲಿ ಮೇಘ ಸ್ಫೋಟ ಉಂಟಾಗಿದ್ದು, 6 ಜನರು ನಾಪತ್ತೆಯಾಗಿದ್ದಾರೆ.