ಉತ್ತರಕಾಶಿ/ಉತ್ತರಾಖಂಡ್: ಭಾರಿ ಮಳೆಯಿಂದಾಗಿ ಉತ್ತರಕಾಶಿಯ ಚುಂಗಿ ಬಡೇತಿ ಗಂಗೋತ್ರಿ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ. ಮಂಗಳವಾರ ಮಧ್ಯಾಹ್ನ ಚುಂಗಿ ಬಡೇತಿ ಬಳಿ ಗಂಗೋತ್ರಿ ಹೆದ್ದಾರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದೆ.
ಈ ಭೂಕುಸಿತ ಹಿನ್ನೆಲೆ ಗಂಗೋತ್ರಿ ಹೆದ್ದಾರಿಯಲ್ಲಿ ನಡೆಯುತ್ತಿರುವ NHIDCL(ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ)ದ ನಿರ್ಮಾಣ ಹಂತದಲ್ಲಿರುವ ತೆರೆದ ಸುರಂಗಕ್ಕೆ ಅಪಾಯ ಎದುರಾಗಿದೆ. ಭೂಕುಸಿತ ಹಿನ್ನೆಲೆ ಭಾಗೀರಥಿ ನದಿಯಲ್ಲಿ ಕುಸಿದ ಗುಡ್ಡದ ಅವಶೇಷಗಳು ಬಿದ್ದಿವೆ. ಭೂಕುಸಿತದಿಂದಾಗಿ ಗಂಗೋತ್ರಿ ಹೈವೇಯ ಸುಮಾರು 50 ಮೀಟರ್ ಗುಡ್ಡ ಕುಸಿದು ಭಾಗೀರಥಿ ನದಿಯಲ್ಲಿ ವಿಲೀನಗೊಂಡಿದೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ವಿಪತ್ತು ನಿರ್ವಹಣಾ ಅಧಿಕಾರಿ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಈ ಮಾರ್ಗದಲ್ಲಿ ಸಂಚಾರ ನಿಷೇಧಿಸಿದ್ದು, ಮನೇರಾ ಬೈಪಾಸ್‌ನಿಂದ ಸಂಚರಿಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.
ಬದರಿನಾಥ ಹೆದ್ದಾರಿ ನಿರ್ಬಂಧ:
ಚಮೋಲಿ ಜಿಲ್ಲೆಯ ಪಿಪಲಕೋಟಿ ಮತ್ತು ಪಖಿ ನಡುವಿನ ಬದರಿನಾಥ ರಾಷ್ಟ್ರೀಯ ಹೆದ್ದಾರಿ -7 ರ ಬನೇರ್ಪಣಿಯಲ್ಲಿರುವ ಬೆಟ್ಟದ ಒಂದು ದೊಡ್ಡ ಭಾಗವು ಕುಸಿದು ಹೆದ್ದಾರಿಗೆ ಬಿದ್ದಿದೆ. ಈ ಹಿನ್ನೆಲೆ ಬದರಿನಾಥ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಪರ್ವತ ಕುಸಿದು ಬೀಳುವ ವಿಡಿಯೋವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.