ನವದೆಹಲಿ: ಭೂಸ್ವಾಧೀನ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿದ್ದ ಮುಂಬೈ - ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಯೋಜನೆಯು ಗುಜರಾತ್ ಮತ್ತು ಮಹಾರಾಷ್ಟ್ರದ ನಡುವೆ ದಾದ್ರಾ ಮತ್ತು ನಗರ ಹವೇಲಿ ಮೂಲಕ 508.17 ಕಿ.ಮೀ ರೈಲು ಮಾರ್ಗವನ್ನು ಹೊಂದಿದೆ. ಈ ಪೈಕಿ ಗುಜರಾತ್‌ನಲ್ಲಿ 348.04 ಕಿ.ಮೀ ಮಾರ್ಗದಲ್ಲಿ ರೈಲು ಚಲಿಸುತ್ತದೆ. ರೈಲ್ವೆ ಮಂಡಳಿಯ ಮುಖ್ಯಸ್ಥರ ಪ್ರಕಾರ, ಈ ವಿಸ್ತರಣೆಯ ಪ್ರಮುಖ ಭಾಗಕ್ಕೆ ಈಗಾಗಲೇ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಈ ಯೋಜನೆಗೆ ಅಗತ್ಯವಿರುವ ಶೇ 95 ರಷ್ಟು ಭೂಮಿಯನ್ನು ಗುಜರಾತ್‌ನಲ್ಲಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ನಾವು ಸಿವಿಲ್ ಇಂಜಿನಿಯರಿಂಗ್ ಕಾಮಗಾರಿಗಳಿಗೆ 327 ಕಿಮೀ (348.04 ಕಿಮೀ) ವಿಸ್ತಾರದಲ್ಲಿ ಗುತ್ತಿಗೆ ನೀಡಿದ್ದು, ಕೆಲಸ ಪ್ರಾರಂಭವಾಗಿದೆ. ಆದರೆ, ಇನ್ನೂ ಮಹಾರಾಷ್ಟ್ರದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ನಾವು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ನಾವು ಅಲ್ಲಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
508.17 ಕಿ.ಮೀ ರೈಲು ಕಾರಿಡಾರ್ ಯೋಜನೆಯು ಮಹಾರಾಷ್ಟ್ರದಲ್ಲಿ 155.76 ಕಿ.ಮೀ ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ 4.3 ಕಿ.ಮೀ. ಹೊಂದಲಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಅಂದಾಜು ವೆಚ್ಚ 1,10,000 ಕೋಟಿ ರೂಪಾಯಿಯದ್ದಾಗಿದೆ. ಇದರಲ್ಲಿ ರೈಲ್ವೆ ಪ್ಲಾಟ್ಫಾರ್ಮ್, ವಯಾಡಕ್ಟ್ಗಳು, ನದಿ ಮತ್ತು ರಸ್ತೆ ಕ್ರಾಸಿಂಗ್ ಯೋಜನೆಗಳನ್ನೂ ಒಳಗೊಂಡಿದೆ. ಈ ಯೋಜನೆಗಾಗಿ ಥಾಣೆ ಮತ್ತು ಬಾಂದ್ರಾ ನಡುವೆ ಸಮುದ್ರದೊಳಗೆ ಸುರಂಗವನ್ನು ನಿರ್ಮಿಸಲಾಗುತ್ತದೆ. ಅದಕ್ಕಾಗಿ ನಾವು ಮಹಾರಾಷ್ಟ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದನನ್ಊ ಓದಿ:75,000 ಕೋಟಿ ರೂ. GST ಪರಿಹಾರ ನೀಡಿದ ಕೇಂದ್ರ.. ಕರ್ನಾಟಕಕ್ಕೆ ಸಿಕ್ತು ಇಷ್ಟೊಂದು ಹಣ
ಇತ್ತೀಚೆಗೆ, ಹೊಸದಾಗಿ ನೇಮಕಗೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಹಮದಾಬಾದ್ - ಮುಂಬೈ ಬುಲೆಟ್ ಟ್ರೈನ್ ಯೋಜನೆಯನ್ನು ಪರಿಶೀಲಿಸಿದರು. ಭೂ ಸ್ವಾಧೀನ ಪ್ರಕ್ರಿಯೆ ನಿಧಾನವಾಗಿದ್ದು, 2023 ರೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮಂತ್ರಿ ಅಭಿಪ್ರಾಯ ಪಟ್ಟಿದ್ದಾರೆ.