ಹೈದರಾಬಾದ್ : ರಾಜ್ಯದಲ್ಲಿ ಇಂದು ಬೋನಾಲು ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕಳೆದ ವರ್ಷ ಕೊರೊನಾದಿಂದಾಗಿ ಭಕ್ತರು ಈ ಆಚರಣೆಯಿಂದ ಹಿಂದೆ ಸರಿದಿದ್ದರು. ಆದರೆ, ಈ ವರ್ಷ ರಾಜ್ಯ ಸರ್ಕಾರ ಈ ಹಬ್ಬವನ್ನು ಆಚರಿಸಲು ಅನುಮತಿ ನೀಡಿದೆ.
ದೇವಾಲಯಗಳಲ್ಲಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಬ್ಬದ ಹಿನ್ನೆಲೆ ಲಾಲ್ ದರ್ವಾಜ ಸಿಂಹವಾಹಿನಿ ಮಹಾಕಾಳಿ ದೇವಾಲಯ, ಚಂದುಲಾಲ್ ಬೇಲಾದಲ್ಲಿರುವ ಮಾಥೇಶ್ವರಿ ದೇವಸ್ಥಾನ, ಹರಿಬೌಲಿಯ ಅಕ್ಕನ ಮಾದಣ್ಣ ದೇವಸ್ಥಾನ, ಶಾಲಿಬಂಡ, ಉಪ್ಪುಗುಡ, ಚಂದ್ರಯಾನಗುಟ್ಟ, ಮೀರಾಳಂ ಮಂಡಿ ಮತ್ತು ಗೌಳಿಗುಡ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಬೋನಾಲು ಹಬ್ಬ ಶನಿವಾರ ಮಧ್ಯರಾತ್ರಿಯಿಂದ ಬಾಳಿಗಂಪ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಇದರ ಜೊತೆಗೆ ರಾಜಕೀಯ ನಾಯಕರು, ಸಚಿವರು ಮತ್ತು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ದೇವಾಲಯಗಳಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಬೋನಾಲು ಹಬ್ಬದ ಗೌರವಾರ್ಥವಾಗಿ ಹೈದರಾಬಾದ್ ಮಹಾನಗರದಲ್ಲಿರುವ ಮದ್ಯದಂಗಡಿಗಳು, ವೈನ್ ಶಾಪ್ಗಳನ್ನು ಮುಚ್ಚಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.