ನವದೆಹಲಿ : ಉತ್ತರಪ್ರದೇಶದ ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಸರ್ಕಾರ ರೈತರ ಪರ ನಿಲ್ಲುವ ಬದಲು ರೈತರಿಗೇ ಬೆದರಿಕೆ ಹಾಕಿದ ಗೃಹ ಸಚಿವ ಅಜಯ್ ಮಿಶ್ರಾ ಅವರ ಬೆಂಬಲಕ್ಕೆ ನಿಂತಿದೆ. ಇದು ಸರ್ಕಾರದ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ನ ಲಖನೌ ಪೀಠ ವಿಚಾರಣೆಯ ವೇಳೆ, ಗೃಹ ಸಚಿವ ಅಜಯ್ ಮಿಶ್ರಾ ರೈತರ ವಿರುದ್ಧ ಹೇಳಿಕೆ ನೀಡದಿದ್ದರೆ, ಈ ಹಿಂಸಾಚಾರ ನಡೆಯುತ್ತಿರಲಿಲ್ಲ. ಜನಪ್ರತಿನಿಧಿಗಳು ಬೇಜವಾಬ್ದಾರಿ ಹೇಳಿಕೆಯನ್ನು ನೀಡಬಾರದು. ಘನತೆಯಿಂದ ನಡೆದುಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡಿತ್ತು.
ಕೋರ್ಟ್ನ ಈ ಹೇಳಿಕೆಯನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಪ್ರಿಯಾಂಕಾ ಗಾಂಧಿ, ಸರ್ಕಾರ ರೈತರ ಪರ ನಿಲ್ಲದೇ ಸಚಿವರ ಹೇಳಿಕೆಯನ್ನೇ ಸಮರ್ಥಿಕೊಳ್ಳುತ್ತಿದೆ. ಇದು ಸರ್ಕಾರದ ರೈತ ವಿರೋಧಿ ಧೋರಣೆ ತೋರಿಸುತ್ತದೆ. ಲಖೀಂಪುರ ಹತ್ಯಾಕಾಂಡದ ಪ್ರಮುಖ ಕಾರಣ ಗೃಹ ಸಚಿವರ ಹೇಳಿಕೆ ಎಂದು ನಮೂದಿಸಿ ಟ್ವೀಟ್ ಮಾಡಿದ್ದಾರೆ.
ಅನ್ಯಾಯಕ್ಕೊಳಗಾದ ರೈತರ ಪರ ಹೋರಾಟ ಮುಂದುವರಿಯುತ್ತದೆ. ಸಂತ್ರಸ್ತ ರೈತರ ಕುಟುಂಬಗಳು ಮತ್ತು ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ. ಕೋರ್ಟ್ನಿಂದ ಛೀಮಾರಿಗೆ ಒಳಗಾದ ಬಿಜೆಪಿ ಸಚಿವರು ಸಭ್ಯವಾಗಿ ನಡೆದುಕೊಳ್ಳಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ.
ಓದಿ: ಕರ್ನಾಟಕ ಬಿಜೆಪಿ ಪ್ರಭಾವಿ ನಾಯಕನ ಕನ್ಸ್ಟ್ರಕ್ಷನ್ ಕಂಪನಿ ಗುತ್ತಿಗೆದಾರನಿಗೆ ಬೆದರಿಕೆ: ಆಂಧ್ರ ಸಿಎಂ ಆಪ್ತನ ಬಂಧನ