ಬುಲಂದ್ಶಹರ್(ಉತ್ತರ ಪ್ರದೇಶ): ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ವೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ದಲ್ಲಿ ನಡೆದಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರಜೂ ಪವಾರ್ ಆತ್ಮಹತ್ಯೆಗೆ ಶರಣಾಗಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್. ಶುಕ್ರವಾರ ಸಂಜೆ 7 ಗಂಟೆಗೆ ಕೆಲಸದಿಂದ ವಾಪಸ್ ಆಗಿದ್ದ ಇವರು, ರಾತ್ರಿ 9 ಗಂಟೆ ಆದರೂ ಊಟಕ್ಕೆ ಬಂದಿರಲಿಲ್ಲ. ಹೀಗಾಗಿ ಮನೆ ಮಾಲೀಕ ಬಾಗಿಲು ತೆರೆದು ನೋಡಲು ಮುಂದಾಗಿದ್ದಾರೆ. ಈ ವೇಳೆ ಬಾಗಿಲು ಒಳಗಡೆಯಿಂದ ಬಂದ್ ಆಗಿತ್ತು. ಕಿಟಕಿಯಿಂದ ಒಳಗಡೆ ನೋಡಿದಾಗ ಆರಜೂ ಪವಾರ್ ಮೃತದೇಹ ಫ್ಯಾನ್ನಲ್ಲಿ ನೇತಾಡುತ್ತಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಮನೆ ಮಾಲೀಕ ಹೇಳಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ಏನೆಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ ಎನ್ನಲಾಗುತ್ತಿದೆ. ಆದರೆ ಅದರಲ್ಲಿ ಏನಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಆರಜೂ 2015ರಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾಗಿದ್ದರು.